ಜಿಲ್ಲೆ

ಆರೋಗ್ಯವಿಲ್ಲದಿದ್ದರೆ ಕೋಟಿ, ಕೋಟಿ ಹಣ ಗಳಿಸಿದರೂ ವ್ಯರ್ಥ

ಮಳವಳ್ಳಿ: ಸಮಾಜದ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈದು ಕೋಟಿ, ಕೋಟಿ ಹಣ ಗಳಿಸಿದರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಅಂತಹ ವ್ಯಕ್ತಿಯ ಜೀವನ ಬದುಕಿದ್ದೂ ವ್ಯರ್ಥವಾದಂತೆ ಎಂದು ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜು(ಮಂಜು) ಅಭಿಪ್ರಾಯಪಟ್ಟರು.


ಹಾಡ್ಲಿ ಗ್ರಾಪಂ ಸಹಯೋಗದಲ್ಲಿ ಬೆಂಗಳೂರಿನ ಎಸ್.ಎಸ್.ಸ್ಪರ್ಶ್ ಆಸ್ಪತ್ರೆ ವತಿಯಿಂದ ಶನಿವಾರ ತಾಲೂಕಿನ ನಡಕಲಪುರ ಗೇಟ್ ಬಳಿ ಇರುವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿರುತ್ತದೆ. ಕುಟುಂಬದ ಹೊಣೆಗಾರಿಕೆಯಿಂದ ತನ್ನ ಮುಂದಾಳತ್ವದಲ್ಲಿ ನಡೆಸುವ ಕೃಷಿ, ಉದ್ಯಮ ಅಥವಾ ಇತರ ಯಾವುದೇ ಕ್ಷೇತ್ರದ ಕಾರ್ಯ ಯಶಸ್ಸನ್ನು ಕಾಣಲು ಆರೋಗ್ಯ ಮತ್ತು ಶಿಕ್ಷಣ ಬಹು ಮುಖ್ಯವಾಗಿರುತ್ತದೆ ಎಂದ ಅವರು, ಮನುಕುಲ ಅಗತ್ಯವಾಗಿ ಸಿಗಬೇಕಿರುವ ಆರೋಗ್ಯ ಹಾಗೂ ಶಿಕ್ಷಣಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.


ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರನ್ನು ಸಭೆ ಕರೆದು ಚರ್ಚಿಸಲಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪಂಚಾಯಿತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದೆಂದು ತಿಳಿಸಲಾಗಿದೆ. ಹಳ್ಳಿಗಳಲ್ಲಿ ಜನಸಾಮಾನ್ಯರು ಆರೋಗ್ಯದಲ್ಲಾಗುವ ವ್ಯತ್ಯಾಸಗಳಿಗೆ ಆಸ್ಪತ್ರೆಗಳಿಗೆ ಹೋಗಿ ವೈದ್ಯರ ಸಲಹೆ ಪಡೆದರೆ ನೂರಾರು ರೂಪಾಯಿ ಖರ್ಚಾಗುತ್ತದೆಂಬ ಭಾವನೆಯಿಂದ ನಿರ್ಲಕ್ಷೃ ಮಾಡುತ್ತಾರೆ. ಕಾಯಿಲೆ ಉಲ್ಬಣವಾದಾಗ ದುಪ್ಪಟ್ಟು ಹಣ ವ್ಯಯಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇಂತಹ ಮನೋಭಾವನೆ ಹೊಂದಿರುವ ಜನರಿಗಾಗಿ ವಿವಿಧ ಆಸ್ಪತ್ರೆಗಳ ಸಹಕಾರ ಕೋರಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿಸಲಾಗಿದೆ ಎಂದರು.


ನೂರಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು. ಗ್ರಾಪಂ ಸದಸ್ಯರಾದ ಮಂಜು ಭೈರೇಶ್, ಲಿಂಗರಾಜು, ವೀರಸ್ವಾಮಿ, ಕೋಮಲಾ, ಪಿಡಿಒ ಲಿಂಗರಾಜು, ಪರಿಸರ ವಿಭಾಗದ ಜಿಲ್ಲಾಧ್ಯಕ್ಷ ಪುಟ್ಟರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಇತರರು ಇದ್ದರು.