ಹೊಳೆನರಸೀಪುರ: ಸಮಾಜ, ಪ್ರಕೃತಿಯಿಂದ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನೂ ಪಡೆದುಕೊಳ್ಳುತ್ತೇವೆ. ಆದ್ದರಿಂದ ನಾನು ಗಳಿಸುವ ಆದಾಯದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಸಮಾಜ ಸೇವೆಗೆ ಮೀಸಲಿಡುತ್ತೇನೆ ಎಂದು ಹಳ್ಳಿಮೈಸೂರಿನ ಸಮಾಜ ಸೇವಕ ಶಾಮಿಯಾನ ಪ್ರಕಾಶ್ ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮೂಡಲಮಾಯಗೌಡನಹಳ್ಳಿ, ನಗ್ಗಲಹಳ್ಳಿ ಹಾಗೂ ನಗರನಹಳ್ಳಿ ಕೊಪ್ಪಲು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಕುಡಿಯುವ ನೀರಿನ ಸ್ಟೀಲ್ ಬಾಟಲ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿ, ಸಮಾಜ ಸೇವೆಯನ್ನು ಮಾಡಿದರೆ ನಮ್ಮ ಮನಸ್ಸಿಗೆ ಸಂತೋಷ ಸಿಗುತ್ತದೆ. ನಮ್ಮ ಮನಸ್ಸು ಸಂತೋಷವಾಗಿದ್ದರೆ ನಮ್ಮ ರಕ್ತದೊತ್ತಡ ಕಡಿಮೆ ಆಗುತ್ತದೆ. ಇತರ ಕಾಯಿಲೆಗಳು ಕಡಿಮೆ ಆಗುತ್ತವೆ ಎಂದರು.
ವೀರಶೈವ ಲಿಂಗಾಯತ ಮಹಾವೇದಿಕೆಯ ವಕೀಲ ಬಿ.ಆರ್.ವಸಂತ್‌ಕುಮಾರ್ ಮಾತನಾಡಿ, ಪ್ರಕಾಶ್ ಅವರು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ಒದಗಿಸುವ, ಬಡವರ ಮದುವೆಗೆ ಸಹಾಯ ಮಾಡುವ ಇನ್ನೂ ಅನೇಕ ಸೇವೆಗಳನ್ನು ನೀಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿದ ಅನೇಕ ಸಂಘ-ಸಂಸ್ಥೆಗಳು ಪ್ರಕಾಶ್ ಅವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ನಾವು ನಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಮರ ಗಿಡಗಳನ್ನು ಕಡಿಯುತ್ತೇವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುತ್ತೇವೆ. ಪ್ರಕೃತಿಯನ್ನು ಹಾಳು ಮಾಡದೆ ಜವಾಬ್ದಾರಿಯಿಂದ ನೆಡೆದುಕೊಂಡರೆ ಅದೂ ಸಹ ಸಮಾಜ ಸೇವೆ ಎನಿಸಿಕೊಳ್ಳುತ್ತದೆ ಎಂದರು. ಸ್ಥಳೀಯರಾದ ಧರ್ಮಣ್ಣ, ಸೋಮಣ್ಣ, ಮಹಾಂತೇಶ, ನಿಂಗರಾಜು, ಬಸವರಾಜು, ಶಿಕ್ಷಕರಾದ ರಮೇಶ್ ಇತರರಿದ್ದರು.