ಕುಮಟಾ: ಧರ್ಮಕ್ಕೆ ಆಧಾರವಾಗಿ ಜಗತ್ತಿನಲ್ಲಿ ಬದುಕುತ್ತಿದ್ದೇನೆಂದು ಪುನರ್ವಿಮರ್ಶೆ ಮಾಡಿಕೊಳ್ಳಬೇಕು. ಉದಾತ್ತವಾದ ಸತ್ಯಗಳೊಡನೆ ನಮ್ಮ ಸಂಬಂಧ ಬೆಳೆಸಬೇಕು ಎಂದು ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಕೋನಳ್ಳಿಯಲ್ಲಿ ನಡೆದಿರುವ 24ನೇ ದಿನದ ಚಾತುರ್ವಸ್ಯ ವ್ರತಾಚಾರಣೆಯಲ್ಲಿ ಶನಿವಾರ ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಸೆಕೊಪ್ಪ, ಹೆಬೈಲ್, ದೇವರಗದ್ದೆ, ಹರಿಟಾ, ಕತಗಾಲ ಭಾಗದ ನಾಮಧಾರಿ ಸಮಾಜದವರಿಂದ ಗುರುಪಾದುಕಾ ಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಭಗವಂತನ ದರ್ಶನಕ್ಕೆ ಅಪಾನವನ್ನು ಪಾನ ಮಾಡಬೇಕು. ಅಪಾನವನ್ನು ಪ್ರಾಣಕ್ಕೆ ಹವಿಸ್ಸಾಗಿ ಸಲ್ಲಿಸಿದರೆ ನಾಡಿಗಳು, ಬುದ್ಧಿ, ಮನಸು ಶುದ್ಧವಾಗುತ್ತದೆ. ಯಜ್ಞಗಳು ಕರ್ಮಭೂಮಿಯಲ್ಲಿ ಕಾಮನೆಗಳನ್ನು ಕೊಡುತ್ತದೆ. ಅದರಾಚೆ ಜೀವನ್ಮುಕ್ತಿಗಾಗಿ ಧ್ಯಾನ ತಪಸ್ಸು ಬೇಕು. ಸಗುಣ ಪರಮಾತ್ಮನಿಗಾಗಿ ನಿರ್ಗಣ ಪರಮಾತ್ಮನ ಪರಿಚಯವಾಗಿರಬೇಕು. ಮನಸು, ಬುದ್ಧಿಯನ್ನು ಪಳಗಿಸಬೇಕು. ಜಗತ್ತು ಮನಸಿನ ಒಳಗೆ ಐಕ್ಯವಾಗಿದೆ. ಮನಸನ್ನು ಗೆದ್ದರೆ ಜಗತ್ತನ್ನೇ ಗೆಲ್ಲಬಹುದು. ಧರ್ಮ ಜಾಗೃತಿ ಮಾಡಿದರೆ ನಮ್ಮ ಜನ್ಮ ಸಾರ್ಥಕ ಎಂದರು.
ಕೊಂಕಣ ಎಜುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಮುರಲೀಧರ ಪ್ರಭು ಮಾತನಾಡಿ, ಮನುಷ್ಯನ ಗುಣವನ್ನು ಜಾತಿಯಿಂದಲ್ಲ, ಒಳಗಿನ ಸತ್ವದಿಂದ ಗುರುತಿಸಬೇಕೆನ್ನುವ ಬ್ರಹ್ಮಾನಂದ ಶ್ರೀಗಳಲ್ಲಿ ನಾರಾಯಣ ಗುರುಗಳ ಗುಣ ತುಂಬಿಕೊಂಡಿದೆ ಎಂದರು.
ಬ್ರಹ್ಮ ಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಅಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ ಮಾತನಾಡಿದರು. ವಿಷ್ಣು ಜಟ್ಟಿ ನಾಯ್ಕ ದಂಪತಿ ಎಡತಾರೆ, ಮಂಜುನಾಥ ಗೋವಿಂದ ನಾಯ್ಕ ದಂಪತಿ ಕೋನಳ್ಳಿ, ಮಂಜುನಾಥ ಬೀರಪ್ಪ ನಾಯ್ಕ ದಂಪತಿ ಬೊಗ್ರಿಬೈಲ್, ಉದಯ ನಾಗಪ್ಪ ನಾಯ್ಕ ದಂಪತಿ ಹೆಬೈಲ್ ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಕೊಂಕಣ ಎಜುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಮುರುಳೀಧರ ವಿ. ಪ್ರಭು, ಟ್ರಸ್ಟಿ ರಮೇಶ ಪ್ರಭು ಇನ್ನಿತರರು ವಿಶೇಷ ಗುರುಸೇವೆಗೈದರು. ಕೊಂಕಣ ಎಜುಕೇಷನ್ ಟ್ರಸ್ಟಿನ ವಿಧಾತ್ರಿ ಅಕಾಡೆಮಿ ಸರಸ್ವತಿ ಪಿಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಸರಸ್ವತಿ ವಿದ್ಯಾಕೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಚಾತುರ್ವಸ್ಯ ಸಮಿತಿ ಅಧ್ಯಕ್ಷ ಎಚ್. ಆರ್. ನಾಯ್ಕ, ನಾಮಧಾರಿ ಸಂಘದ ಮಂಜುನಾಥ ಆರ್. ನಾಯ್ಕ, ಟಿ.ಟಿ. ನಾಯ್ಕ ಹೊನ್ನಾವರ ಇತರರು ಇದ್ದರು.