ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆದ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಶ್ರೀಮಠದ ಗುರುಸಿದ್ಧೇಶ್ವರ ಶ್ರೀಗಳನ್ನು ಭಕ್ತರು ಸನ್ಮಾನಿಸಿದರು. ಜೋಡಕುರಳಿ ಚಿದ್ಘನಾನಂದ ಮಹಾಸ್ವಾಮಿಗಳು, ನವಲಗುಂದ ನಾಗಲಿಂಗ ಸ್ವಾಮಿಮಠದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ಇದ್ದರು. 
ಜಿಲ್ಲೆ

ಗುರುವಿನ ಗುಲಾಮನಾದರೆ ಬದುಕು ಬಂಗಾರ

ರಬಕವಿ-ಬನಹಟ್ಟಿ: ಗುರುವಿಲ್ಲದೆ ಯಾವುದೇ ವಿದ್ಯೆ ಇಲ್ಲ. ಗುರುವಿನ ಮಾರ್ಗದರ್ಶನವಾದಾಗ ಮಾತ್ರ ಬದುಕು ಬಂಗಾರವಾಗಲು ಸಾಧ್ಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.

ನಗರದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಜೀವನ ದರ್ಶನ ಕುರಿತು ಒಂದು ತಿಂಗಳವರೆಗೆ ಆಶ್ರಮದಲ್ಲಿ ಪ್ರವಚನ ಮೂಲಕ ಭಕ್ತರಿಗೆ ಉಣಬಡಿಸಿದ್ದು ಸಂತಸ ತಂದಿದೆ. ಪ್ರವಚನ ಮಾಡುತ್ತ ಮಾಡುತ್ತ ನಾವೂ ನಾಗಲಿಂಗರ ಮಹಿಮೆಗೆ ಒಳಗಾಗಿದ್ದೇವೆ ಎಂದರು.

ಜೋಡಕುರಳಿ ಸಿದ್ಧಾರೂಢ ಸ್ವಾಮಿಗಳ ಆರಾಧಕ ಚಿದ್ಘನಾನಂದ ಮಹಾಸ್ವಾಮಿಗಳು ಮಾತನಾಡಿದರು.

ನಂತರ ನವಲಗುಂದ ನಾಗಲಿಂಗ ಸ್ವಾಮಿಮಠದ ವೀರೇಂದ್ರ ಮಹಾಸ್ವಾಮಿಗಳು ಮಾತನಾಡಿ, ನಾಗಲಿಂಗರು 19ನೇ ಶತಮಾನದಲ್ಲೂ ಅನೇಕ ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

ಬೆಳಗ್ಗೆ 5.30ಕ್ಕೆ ಬ್ರಹ್ಮಾನಂದರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಸಾಮೂಹಿಕ ಜಪಯೋಗ ನಡೆದವು. ನಂತರ ಶ್ರೀಗಳ ಪಲ್ಲಕ್ಕಿ ಉತ್ಸವ ನಡೆಯಿತು.

ಸಮಾರಂಭದಲ್ಲಿ ಆಶ್ರಮದ ಸಾವಿರಾರು ಭಕ್ತರು, ಸಂಶಿ, ಶಿರೂರ, ಅದರಗುಂಚಿ, ಅಡರಟ್ಟಿ, ಸ್ವರ್ಣಗಿರಿ, ಬೀರವಳ್ಳಿ, ತಬಕದಹೊನ್ನಿಹಳ್ಳಿ, ಕಮದೋಡ, ತೇರದಾಳ, ಪರಮಾನಂದವಾಡಿ ಗ್ರಾಮಗಳ ಜನರು ಭಾಗವಹಿಸಿದ್ದರು. ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.