* ಡಿಸಿಎಂ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಗೆ ಸೂಚನೆ
ಕನಕಪುರ
ಸರ್ಕಾರಿ ಕೆಲಸ ಮಾಡಿಸಿಕೊಡಲು ಅಧಿಕಾರಿಗಳು ಇಲ್ಲವೇ ಮುಖಂಡರು ಲಂಚ ಕೇಳಿದರೆ ಹಣ ಕೊಡುವ ಬದಲು ನನ್ನ ಬೆಂಗಳೂರಿನ ವಿಳಾಸಕ್ಕೆ ಪತ್ರ ಬರೆಯಿರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಗೆ ತಿಳಿಸಿದರು.
ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ತಾಲೂಕಿನಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯಬೇಕು. ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಬೇಕು ಎಂದರು.
ಈ ಹಿಂದೆ 8 ಸಾವಿರಕ್ಕೂ ಹೆಚ್ಚು ಜನರಿಗೆ ಬಗರ್ ಹುಕುಂ ಜಮೀನು ನೀಡಿದ್ದೇವೆ. ನಿವೇಶನ, ಮನೆ ಹಂಚಿದ್ದೇವೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಜನರು ಆಶೀರ್ವಾದ ಮಾಡಲಿಲ್ಲ. ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ ಎಂದರು.
ಈ ಭಾಗವನ್ನು ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಜಮೀನುಗಳ ಬೆಲೆ ಹೆಚ್ಚಾಗಿದೆ. ನಾನು ಹಿಂದೆ ಜಮೀನುಗಳನ್ನು ಮಾರಬೇಡಿ ಎಂದು ಸಲಹೆ ನೀಡಿದ್ದೆ. ಆದರೂ ಒಂದಷ್ಟು ಜನ ಮಾರಿಕೊಂಡಿದ್ದಾರೆ ಎಂದ ಅವರು, ಈ ಭಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಎಂಟು ಎಕರೆಯಲ್ಲಿ ಸಿಎಸ್ಆರ್ ನಿಧಿಯಿಂದ ದೊಡ್ಡ ಶಾಲೆ ನಿಮಾರ್ಣಕ್ಕೆ ಮುಂದಾಗಿದ್ದೇನೆ ಎಂದರು.
ರೇಷ್ಮೆ ಕೃಷಿ ಕೈ ಬಿಡಬೇಡಿ: ವಾಣಿಜ್ಯ ಬೆಳೆಗಳಿಗೆ ಉತ್ತಮ ಬೇಡಿಕೆಯಿದೆ. ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ರೇಷ್ಮೆ ಉತ್ಪಾದಿಸುವ ತಾಲೂಕು ನಮ್ಮದು. ಯಾವುದೇ ಕಾರಣಕ್ಕೂ ರೇಷ್ಮೆ ಬೆಳೆಯನ್ನು ಕೈಬಿಡಬೇಡಿ ಎಂದು ಕೃಷಿಕರಿಗೆ ಡಿಸಿಎಂ ಕಿವಿಮಾತು ಹೇಳಿದರು.
ಬಸ್ಗಳು ಸರಿಯಾದ ಸಮಯಕ್ಕೆ ಬರದ ಕಾರಣಕ್ಕೆ ನಾವು ವಾರಕ್ಕೆ ಮೂರು ದಿನ ತರಗತಿಗೆ ಸರಿಯಾಗಿ ಬರಲು ಆಗುತ್ತಿಲ್ಲ. ಹರಿಹರದಿಂದ ಸಾತನೂರುವರೆಗೆ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಬೇಕೆಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಾದ ಹರ್ಷಿತಾ, ಗಾನವಿ, ಕುಸುಮಾ, ಕೀರ್ತನಾ, ದಿವ್ಯಾ ಅವರ ಮನವಿಗೆ ಡಿಸಿಎಂ ಮನವಿ ಮಾಡಿದರು. ಅದೇ ರೀತಿ ತೇಜಸ್ವಿನಿ, ಶ್ವೇತಾ, ಅನು, ಮಂಗಳ ಗೌರಿ ಅವರು "ನಮ್ಮ ಊರುಗಳಲ್ಲಿ ಬಸ್ ನಿಲ್ಲಿಸುತ್ತಿಲ್ಲ' ಎಂದರು. ಈ ವಿದ್ಯಾರ್ಥಿಗಳು ಪ್ರಯಾಣ ಮಾಡುವ ಹಲಗೂರಿನಿಂದ ಕನಕಪುರಕ್ಕೆ ಬರುವ ಬಸ್ಗಳು ಪ್ರತಿ ಹಳ್ಳಿಗಳಲ್ಲಿ ನಿಲ್ಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ ಎಂದು ಕೆಎಸ್ಆರ್ಟಿಸಿ ಡಿಟಿಒ ರಾಘವೇಂದ್ರ ಅವರಿಗೆ ಶಿವಕುಮಾರ್ ಸೂಚನೆ ನೀಡಿದರು.
ನಾನು ಪಕ್ಕಾ ಕಾಂಗ್ರೆಸ್ ಅಭಿಮಾನಿ, ಡಿ.ಕೆ. ಸುರೇಶ್ ಪರವಾಗಿ ಕೆಲಸ ಮಾಡುತ್ತಾ ಇದ್ದೇನೆ. ನನಗೆ ಬಗರ್ ಹುಕುಂ ಜಮೀನು ನೀಡಿ ಎಂದು ಸೋರೆಕಾಯಿದೊಡ್ಡಿಯ ಸುಶೀಲಮ್ಮ ಅವರು ಮನವಿ ಮಾಡಿದಾಗ "ಸುರೇಶ್ ಅವರಿಗೆ ಹೇಳುತ್ತೇನೆ. ಈ ಬಾರಿ ನಿನಗೆ ಜಮೀನು ಕೈ ತಪ್ಪುವುದಿಲ್ಲ' ಎಂದು ಭರವಸೆ ನೀಡಿದರು.
ಸಾತನೂರು ಪಟ್ಟಣದ ಸುಮಾರು 90 ವರ್ಷದ ಕೆಂಚೇಗೌಡ ಅವರು "ನನಗೆ ಪಿಂಚಣಿ ಬರುವುದು ನಿಂತು ಹೋಗಿ ಒಂದೂವರೆ ವರ್ಷಗಳಾಗಿವೆ. ನೀವೇ ಪರಿಹಾರ ನೀಡಿ' ಎಂದು ಕೇಳಿದಾಗ "ಇವರ ಸಮಸ್ಯೆಯನ್ನೂ ಯಾವುದೇ ಕಾರಣಕ್ಕೂ ಮರೆಯಬೇಡಿ, ಕೂಡಲೇ ಬಗೆಹರಿಸಿ' ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗರಸನಕೋಟೆಯ ಚೈತ್ರಾ ಅವರು ಬೆಂಗಳೂರಿನ ಜ್ಞಾನಭಾರತಿಯಲ್ಲಿ ಎಂಸಿಎ ಸೀಟು ಕೊಡಿಸಿ ಎಂದು ಮನವಿ ಮಾಡಿದಾಗ ಪಕ್ಕದಲ್ಲಿಯೇ ಇದ್ದ ಕರಿಯಪ್ಪ ರೂರಲ್ ಕಾಲೇಜಿನ ಅಧ್ಯಕ್ಷ ಶ್ರೀಕಂಠು ಅವರನ್ನು ಕರೆದು
"ನಿಮ್ಮ ಕಾಲೇಜಿನಲ್ಲಿ ಸೀಟು ಕೊಡಿ' ಎಂದ ಡಿಸಿಎಂ, ವಿದ್ಯಾರ್ಥಿನಿಯನ್ನು ಕುರಿತು "ಅಷ್ಟು ದೂರ ಏಕೆ? ಈ ಕಾಲೇಜು ಚೆನ್ನಾಗಿದೆ, ಇಲ್ಲಿಯೇ ಓದು ' ಎಂದು ಹೇಳಿದರು.
ಜನ ಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 700 ಅರ್ಜಿಗಳು ಸಲ್ಲಿಕೆ ಆಗಿದ್ದವು. ಬಹುತೇಕ ಅರ್ಜೀಗಳನ್ನು ಡಿಸಿಎಂ ಸ್ಥಳದಲ್ಲಿಯೇ ವಿಲೇ ಮಾಡಿದರು.