ಸೊರಬ: ಬಸವಾದಿ ಶರಣರು ಕಾಯಕಕ್ಕೆ ಮಹತ್ವ ನೀಡಿದ್ದರು. ಅಂತೆಯೇ ವೃತ್ತಿ ಯಾವುದೇ ಇರಲಿ. ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಶ್ರದ್ಧೆ ಇದ್ದಾಗ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.
ಗುರುವಾರ ಮುರುಘಾಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಹಾಗೂ ಕಲ್ಲಂಬಿ ಶೇಟ್ ಮನೆತನದಿಂದ ಏರ್ಪಡಿಸಿದ್ದ ಗುರುಪೂಜೆ, ಪತ್ರಿಕಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
12ನೇ ಶತಮಾನದಲ್ಲಿ ವಚನ ಶ್ರೇಷ್ಠ ಬಸವಣ್ಣ ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿದರು. ಅವರು ತೋರಿದ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಶ್ರೇಷ್ಠತೆಯನ್ನು ಸಾಧಿಸುವ ವ್ಯಕ್ತಿಯು ಜಾತಿ, ಮತಗಳ ಬೇಧವಿಲ್ಲದೇ ಆದರ್ಶಮಯ ಬದುಕನ್ನು ಸಾಧಿಸಲು ಇಚ್ಛೆ ಪಡುತ್ತಾರೆ. ಕಲ್ಲಂಬಿ ಶೇಟ್ ಮನೆತನದವರು ಗುರುಪೂಜೆ ಹಮ್ಮಿಕೊಂಡು ತಮ್ಮ ಮಕ್ಕಳಿಂದ ಅವರ ಶಿಕ್ಷಕರಿಗೆ ಗುರು ನಮನ ಸಲ್ಲಿಸುತ್ತಿರುವುದು ಶ್ರೇಷ್ಠವಾದ ಕಾರ್ಯ. ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡುತ್ತದೆ. ಜತೆಗೆ ಉತ್ತಮ ಸಮಾಜದ ನಿರ್ಮಾಣದಲ್ಲಿ ಮಾಧ್ಯಮದವರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರನ್ನು ಸನ್ಮಾನಿಸುತ್ತಿರುವುದು ವಿಶೇಷ. ಇಂತಹ ಸತ್ಕಾರ್ಯಗಳಿಗೆ ಶ್ರೀಮಠದ ಸಹಕಾರ ಸದಾ ಇರುತ್ತದೆ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ. ಅಂತೆಯೇ ಮಕ್ಕಳಿಗೆ ಮನೆಯಿಂದಲೇ ಗುರುಹಿರಿಯರಿಗೆ ಗೌರವ ನೀಡಬೇಕು ಎನ್ನುವ ಸಂಸ್ಕಾರವನ್ನು ಬಿತ್ತುವ ಕಾರ್ಯವಾಗಬೇಕು. ಇದರ ಭಾಗವಾಗಿಯೇ ನಮ್ಮ ಮನೆತನದ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಶಾಲೆಯ ಶಿಕ್ಷಕರಿಗೆ ಅವರ ಮೂಲಕವೇ ಗುರುಪೂಜೆ ಸಲ್ಲಿಸಲಾಗುತ್ತಿದೆ. ಜತೆಗೆ ನಾವು ಸಹ ಪತ್ರಿಕಾ ಕ್ಷೇತ್ರದಲ್ಲಿ ಕೆಲ ಸಮಯ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಗೌರವ ಸೂಚಿಸಬೇಕು ಎಂಬ ನಿಟ್ಟಿನಲ್ಲಿ ಪತ್ರಿಕಾ ದಿನಾಚರಣೆ ನಡೆಸಲಾಗುತ್ತಿದೆ ಎಂದರು.
ಶಿಕ್ಷಕರು, ಪತ್ರಕರ್ತರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ಪ್ರೇಮಾ, ಆಫ್ರೀನಾ, ಸುಲ್ತಾನಬೇಗಂ ಅವರನ್ನು ಅಭಿನಂದಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆ ಅಧ್ಯಕ್ಷ ಜೆ.ಎಸ್.ನಾಗರಾಜ್ ಜೈನ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ರಾಘವೇಂದ್ರ, ಮುರುಘಾಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಪ್ರಮುಖರಾದ ನಾಗರಾಜ ಗುತ್ತಿ, ಶಂಕರ್ ಶೇಟ್, ಪಾಣಿ ರಾಜಪ್ಪ, ಸಿ.ಪಿ.ಈರೇಶ್ ಗೌಡ, ಕಲ್ಲಂಬಿ ಶೇಟ್ ಮನೆತನವರಾದ ಗೋಪಾಲಕೃಷ್ಣ ಶೇಟ್, ಲಕ್ಷ್ಮಮ್ಮ, ರತ್ನಾ ಮಧುರಾಯ್ ಶೇಟ್, ಪರಶುರಾಮ ಶೇಟ್, ಕೃಷ್ಣಮೂರ್ತಿ, ಮರಿ ಶೇಟ್, ಶಶಿಕಲಾ, ಮಾಲತೇಶ ಶೇಟ್, ವಿನುತಾ, ಸಮನಿತಾ, ಶ್ರೀತರುಣ್ ಇತರರಿದ್ದರು.