ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಎಸ್.ಲೋಲಾಕ್ಷಿ, ಟಿ.ಪದ್ಮಾ ಅವರನ್ನು ಗೌರವಿಸಲಾಯಿತು. ಡಿ ತಾರಾದೇವಿ, ಎಸ್.ಅನುರಾಧಾ ಇತರರಿದ್ದರು.  
ಜಿಲ್ಲೆ

ಮಹಿಳೆಯರು ಸಬಲರಾದರೆ ದೇಶ ಅಭಿವೃದ್ಧಿ

ಲೋಕೇಶ್ ಮನು. ಡಿ

ಅರಕಲಗೂಡು: ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಗುರುತಿಸಿಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಟಿ.ಪದ್ಮಾ ಅಭಿಪ್ರಾಯಪಟ್ಟರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇವಲ ಕುಟುಂಬಕಷ್ಟೆ ಸೀಮಿತವಾಗಿದ್ದ ಮಹಿಳೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತನ್ನ ಸಾಧನೆ ಮೆರೆದಿದ್ದಾಳೆ. ಆದರೂ ಮಹಿಳೆಯರ ಆರ್ಥಿಕ ಪ್ರಗತಿಗೆ ಹಲವು ರೀತಿಯ ಅಡ್ಡಿಗಳಿವೆ. ಇದನ್ನು ನಿವಾರಿಸಿಕೊಂಡು ಮುಂದುವರಿದಾಗ ಹೆಚ್ಚಿನ ಸಾಧನೆ ಸಾಧ್ಯ ಎಂದರು.


ಯೂನಿಟಿ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಿ.ಎಸ್.ಲೋಲಾಕ್ಷಿ ಮಾತನಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಸ್.ಅನುರಾಧಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲೆ ಡಿ.ತಾರಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.