ಕುಂದಗೋಳ: ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ವಿುಸದಿದ್ದರೆ ಜಯಂತ್ಯುತ್ಸವ ಆಚರಿಸುವುದಿಲ್ಲ ಎಂದು ಎಸ್ಟಿ ಸಮುದಾಯದ ರಾಜು ದೊಡ್ಡಶಂಕರ ಎಚ್ಚರಿಸಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಸಭಾಭವನದಲ್ಲಿ ಬುಧವಾರ ಕರೆದಿದ್ದ ಎಸ್ಸಿ, ಎಸ್ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಟಿ ಸಮುದಾಯಕ್ಕೆ ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ವಿುಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಜಾಗ ಗುರುತಿಸುವಲ್ಲಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಟ್ರ್ಯಾಕ್ಟರ್, ಗೊಬ್ಬರ, ಬೀಜ ವಿತರಣೆಯಲ್ಲೂ ನಮ್ಮ ಸಮುದಾಯಕ್ಕೆ ತಾರತಮ್ಯವಾಗುತ್ತಿದೆ. ಶಿಕ್ಷಣ ಇಲಾಖೆಯ ಸಹಾಯಧನ ಸರಿಯಾಗಿ ಸಿಗುತ್ತಿಲ್ಲ. ತಾಲೂಕು ಪಂಚಾಯಿತಿಯಲ್ಲಿ ಸಮುದಾಯದ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಕ. ಗುದಗಿಯವರ ಮಾತನಾಡಿ, ಹಿಂದಿನ ಕುಂದು ಕೊರತೆ ಸಭೆಯಲ್ಲಿ 15 ಅರ್ಜಿಗಳು ಬಂದಿದ್ದು, ಅದರಲ್ಲಿ 10 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಇಂದಿನ ಸಭೆಯಲ್ಲಿ 17 ಅರ್ಜಿ ಬಂದಿದ್ದು, ಪರಿಶೀಲಿಸಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸರ್ಕಾರ ಕೋಟಿಗಟ್ಟಲೇ ಅನುದಾನ ಬಿಡುಗಡೆಗೊಳಿಸಿದರೂ ಎಸ್ಸಿ ಸಮುದಾಯದವರಿಗೂ ಸಮರ್ಪಕ ಸೌಕರ್ಯಗಳು ದೊರೆಯುತ್ತಿಲ್ಲ, ಡಾ. ಬಿ.ಆರ್. ಅಂಬೇಡ್ಕರ್ ಹೊಸ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಈರಪ್ಪ ನಾಗಣ್ಣವರ ಮನವಿ ಮಾಡಿದರು. ತಾಲೂಕಿನ ಕೆಲ ಗ್ರಾಮಗಳಲ್ಲಿ ನಮ್ಮ ಸಮುದಾಯದವರಿಗೆ ರುದ್ರಭೂಮಿ ಇಲ್ಲದ್ದರಿಂದ ಶವ ಸಂಸ್ಕಾರ ಮಾಡಲು ಪರದಾಡಬೇಕಾದ ಸ್ಥಿತಿಯಿದೆ. ಗ್ರಾಮ ಪಂಚಾಯಿತಿಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ಸರಿಯಾಗಿ ರಸ್ತೆ, ಗಟಾರು ಕಾಮಗಾರಿಗಳಾಗಿಲ್ಲ. ಅಲ್ಲದೆ, ರಸ್ತೆ ಕಳಪೆ ಮಟ್ಟದಾಗಿವೆ ಎಂದು ಸಾರ್ವಜನಿಕರು ದೂರಿದರು. ತಾಪಂ ಇಒ ಜಗದೀಶ ಕಮ್ಮಾರ, ಮಾತನಾಡಿ, ಗ್ರಾಪಂ ಹಾಗೂ ತಾಪಂ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು. ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಕೆಲಸ ನೀಡಲಾಗುವುದು ಎಂದರು.
ತಹಸೀಲ್ದಾರ್ ರಾಜು ಮಾವರಕರ ಮಾತನಾಡಿ, ಕುಂದುಕೊರತೆಗಳು ಗಮನಕ್ಕೆ ಬಂದಿದ್ದು, ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸಿಪಿಐ ಶಿವಾನಂದ ಅಂಬಿಗೇರ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎಸ್ಸಿ, ಎಸ್ಟಿ ಸಮುದಾಯದ ಹಿರಿಯರು ಉಪಸ್ಥಿತರಿದ್ದರು.