ಅಥಣಿ ಗ್ರಾಮೀಣ: ಧರ್ಮದ ಮರ್ಮವನ್ನರಿತು ಜೀವನ ಮಾಡಿದರೆ, ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ತುಬಚಿ ವಿರಕ್ತಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ದಸರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರವಚನದಿಂದ ಧರ್ಮ ಜಾಗೃತಿ ಹಾಗೂ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ. ಪ್ರವಚನದ ಆಲಿಸುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತಪ್ಪದೆ ಪಾಲ್ಗೊಳ್ಳಬೇಕು ಎಂದು ಹೇಳಿದರು.
ತಿಕೋಟಾದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಒಳ್ಳೆಯ ಮಾರ್ಗದಲ್ಲಿ ಮುನ್ನಡೆದಾಗ ಜೀವನ ಅರ್ಥಪೂರ್ಣ ಎನಿಸುತ್ತದೆ. ದಾನ, ಧರ್ಮದಿಂದ ನೆಮ್ಮದಿ ದೊರೆಯುತ್ತದೆ ಎಂದರು. ಝುಂಜರವಾಡದ ಬಸವರಾಜೇಂದ್ರ ಶರಣರು ಮಾತನಾಡಿದರು. ಪ್ರವಚನ ನೀಡಿದ ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು.
808 ಸುಮಂಗಲೆಯರಿಗೆ ಉಡಿ ತುಂಬಲಾಯಿತು. ಜಗದೀಶ ಅವಟಿ, ನಾರಾಯಣ ಅಂಬಾಜಿ, ಪಾಂಡುಗೌಡ ನಾಯಿಕ, ಸಚಿನ ಚವ್ಹಾಣ, ಸಂಬಾಜಿ ಗುರ್ಲಾಪುರ, ಅಪ್ಪಯ್ಯಸ್ವಾಮಿ ತುಬಚಿ, ಮುತ್ತಪ್ಪ ನಾಯಿಕ, ವಸಂತ ಚವ್ಹಾಣ, ಭೀಮಪ್ಪ ಮೆಂಡಿಗೇರಿ, ಶಂಕರ ಸವದಿ ಇತರರು ಇದ್ದರು.