ಜಿಲ್ಲೆ

ಕುಡಿಯುವ ನೀರಿನ ಕೊರತೆ ಭೀತಿಯಲ್ಲಿ ಮೈಸೂರು ನಗರ

ಮೈಸೂರು: ಮುಂಗಾರು 25 ದಿನಗಳ ಒಳಗೆ ಚುರುಕಾಗದೆ ಹೋದರೆ ನಗರ ಪ್ರತಿನಿತ್ಯ 50 ಎಂಎಲ್‌ಡಿ ನೀರಿನ ಕೊರತೆ ಎದುರಿಸಲಿದ್ದು, ಈ ಕೊರತೆ ನೀಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.

ನಗರಕ್ಕೆ ಪ್ರತಿನಿತ್ಯ 305 ಎಂಲ್‌ಡಿ ನೀರಿನ ಅವಶ್ಯಕತೆ ಇದ್ದು, 25 ದಿನಗಳವರೆಗೆ ಮಳೆ ಬಾರದೆ ಇದ್ದರೂ 305 ಎಂಎಲ್‌ಡಿ ನೀರು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಎದುರಾಗದು. ನಗರಕ್ಕೆ ಮೇಳಾಪುರ, ಹೊಂಗಳ್ಳಿ, ಬೆಳಗೊಳ ಹಾಗೂ ಕಬಿನಿಯಿಂದ (ಕಪಿಲಾ ನದಿ) ನೀರು ಪೂರೈಕೆಯಾಗುತ್ತಿದೆ. ಕಬಿನಿ, ಮೇಳಾಪುರ ಹಾಗೂ ಬೆಳಗೊಳದಲ್ಲಿ ಡೆಡ್ ಸ್ಟೋರೇಜ್‌ವರೆಗೂ ನೀರನ್ನು ಮೇಲೆತ್ತಲು ಅವಕಾಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಂಗಳ್ಳಿಯಲ್ಲಿ ಪ್ರತಿನಿತ್ಯ 105 ಎಂಎಲ್‌ಡಿ ನೀರನ್ನು ಮೇಲೆತ್ತಲಾಗುತ್ತದೆ. ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 77 ಅಡಿ ನೀರು ಇದ್ದು, ನೀರಿನ ಮಟ್ಟ 68 ಅಡಿಗಿಂತ ಕಡಿಮೆಯಾದರೆ ಹೊಂಗಳ್ಳಿಯಲ್ಲಿ ಪ್ರತಿನಿತ್ಯ 50 ಎಂಎಲ್‌ಡಿ ನೀರಿನ ಕೊರತೆ ಎದುರಾಗ ಲಿದೆ. ಈ ಕೊರತೆಯನ್ನು ಬೇರೆ ಕಡೆಯಿಂದ ಹೊಂದಾಣಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಮೇಯರ್ ಶಿವಕುಮಾರ್ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಎದುರಾದರೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳೊ ಂದಿಗೆ ಚರ್ಚೆ ನಡೆಸಲಾಗುವುದು. ಮುಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಜನರು ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.