ಜಿಲ್ಲೆ

ಮಠ ಪರಂಪರೆ ಇಲ್ಲದಿದ್ದರೆ ಜನರಿಗೆ ಸಂಕಷ್ಟ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್

ಮೈಸೂರು: ನೊಂದು ಬಂದವರಿಗೆ ಆಶ್ರಯ, ಅಕ್ಷರ, ದಾಸೋಹದ ಜತೆಗೆ ಆರೋಗ್ಯದ ಸೇವೆ ನೀಡುವ ಮೂಲಕ ನಮ್ಮ ನಡುವೆ ಡಾ.ಶ್ರೀಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.

ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಶ್ರೀಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಮಹೋತ್ಸವ ಹಾಗೂ ವಿಷ್ಣುಸಂಕಲ್ಪ ಜ್ಯೋತಿಷ ಕೇಂದ್ರ ಉದ್ಘಾಟನೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಸುತ್ತೂರು, ಸಿದ್ಧಗಂಗಾ ಮಠ ಸೇರಿದಂತೆ ಅನೇಕ ಮಠಗಳು ಜಾತ್ಯತೀತ, ಧರ್ಮಾತೀತವಾಗಿ ಬೆಳೆದು ಬಂದಿರುವ ಶ್ರೇಷ್ಠತೆಯ ಪ್ರತೀಕವಾಗಿವೆ. ಕರ್ನಾಟಕದಲ್ಲಿ ಮಠ ಪರಂಪರೆ ಇಲ್ಲದಿದ್ದರೆ ಜನರು ಸಂಕಷ್ಟ ಪಡಬೇಕಾಗಿತ್ತು. ನೊಂದವರಿಗೆ ಆಶ್ರಯ, ಹಸಿದವರಿಗೆ ಅನ್ನ, ಅಕ್ಷರ, ಆರೋಗ್ಯ ನೀಡಿವೆ ಎಂದರು.

ಸಿದ್ಧಗಂಗಾ ಹಿರಿಯ ಶ್ರೀಗಳು ಮುಂದಿನ ನೂರು ವರ್ಷಗಳಿಗಾಗುವ ಸಂಪತ್ತನ್ನು ಮಠಕ್ಕಾಗಿ ಉಳಿಸಿ ಹೋಗಿದ್ದಾರೆ. ಅವರ ಅದ್ವಿತೀಯ ಕಾರ್ಯಕ್ಕಾಗಿ ದೇಶವಲ್ಲದೆ ವಿದೇಶಿಗರೂ ಮನಸೋತು ಸಹಾಯ ಹಸ್ತ ಚಾಚಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಇಂತಹ ಸ್ವಾಮೀಜಿ ಪಡೆದ ನಮ್ಮ ನಾಡು ಸರ್ವಕ್ಕೂ ಶ್ರೇಷ್ಠ ಎಂದು ಹೇಳಿದರು.

ಲೇಖಕಿ ಕೆ.ಲೀಲಾ ಪ್ರಕಾಶ್ ಮಾತನಾಡಿ, ಶಿವನು ಸರ್ಪಭೂಷಣವಾದರೆ, ಶಿವಕುಮಾರ ಸ್ವಾಮೀಜಿ ಪದ್ಮಭೂಷಣರು. ದೇವರು ಸ್ವಾಮೀಜಿಗೆ ವಿಶೇಷ ಶಕ್ತಿ ನೀಡಿದ್ದ. ಹಲವು ಮಠಮಾನ್ಯಗಳಲ್ಲಿ ಯಾರಿಗೂ ಸುಮ್ಮನೆ ದಾಸೋಹ ಮಾಡುತ್ತಿರಲಿಲ್ಲ. ಎಲ್ಲರಲ್ಲೂ ಕಾಯಕ ಮಾಡಿಸಿ ದಾಸೋಹ ಮಾಡುತ್ತಿದ್ದರು. ಅದರಿಂದ ವಿದ್ಯಾರ್ಥಿಗಳಲ್ಲಿ ಭಕ್ತಿ, ಜವಾಬ್ದಾರಿ ಹಾಗೂ ನಿಜ ಜೀವನದ ಬದ್ಧತೆ ಕಾಣುವಂತಾಗುತ್ತಿತ್ತು ಎಂದರು.

ಶಿವಕುಮಾರ ಸ್ವಾಮೀಜಿ ಅವರು ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಬೇವಿನ ಕಷಾಯ ಸೇವಿಸುತ್ತಿದ್ದರು. ಆದರೆ ಇಡೀ ಸಮಾಜಕ್ಕೆ ಸಿಹಿ ಉಣಬಡಿಸಿದರು ಎಂದು ತಿಳಿಸಿದರು.

ಮೈಸೂರು ರೈಲು ನಿಲ್ದಾಣ ಸಲಹಾ ಸಮಿತಿ ಸದಸ್ಯ ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ಹಲವು ಮಹನೀಯರ ಜಯಂತಿಯಂತೆ ಪ್ರತಿ ವರ್ಷ ಎಲ್ಲ ಕಡೆ ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ ಮಾಡುವಂತಹ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಷ್ಣುಸಂಕಲ್ಪ ಜ್ಯೋತಿಷ ಕೇಂದ್ರ ಉದ್ಘಾಟನೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಜ್ಯೋತಿಷಿ ಶ್ರೀವಿಷ್ಣು ಸಾಲಿಗ್ರಾಮ ಸ್ವಾಮಿ, ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಹಿರಿಯ ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಚಲನಚಿತ್ರ ನಟ ಸುಪ್ರೀತ್, ಹಿರಿಯ ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ, ಲಯನ್ಸ್ ಸಂಸ್ಥೆಯ ಗೋಲ್ಡ್ ಟಿ.ಸುರೇಶ್ ಇದ್ದರು.