ಜಿಲ್ಲೆ

ಗುರುವಿನಲ್ಲಿ ನಂಬಿಕೆ ಇದ್ದರೆ ಶಿಷ್ಯನ ಉದ್ಧಾರ

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಜಯರಾಂ ಅಭಿಮತ ಜಂಗಮಕೋಟೆಯಿಂದ ಸಂಕೀರ್ತನಾ ಪಾದಯಾತ್ರೆ

ಚಿಂತಾಮಣಿ: ಸದ್ಗುರು ಕೈವಾರ ತಾತಯ್ಯ ಅವರು ಕರುಣಾಮಯರಾಗಿ ಶಿಷ್ಯನನ್ನು ಉದ್ಧರಿಸುತ್ತಾರೆ. ಮೊದಲು ಗುರುವಿನಲ್ಲಿ ನಂಬಿಕೆ ಇರಿಸಿಕೊಳ್ಳುವುದು ಮುಖ್ಯ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀ ಕ್ಷೇತ್ರ ಕೈವಾರ ಸದ್ಗುರು ಶ್ರೀ ಯೋಗಿನಾರೇಯಣ ಮಠಕ್ಕೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಿಂದ ಸಂಕೀರ್ತನಾ ಪಾದಯಾತ್ರೆ ಮೂಲಕ ಆಗಮಿಸಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿ, ಕೈವಾರದ ಸಂತ ಶ್ರೀ ಯೋಗಿನಾರೇಯಣ ತಾತಯ್ಯ ಅವರು ತಮ್ಮ ಬೋಧನೆಗಳಲ್ಲಿ ಗುರುವಿನ ಲಕ್ಷಣ, ಸ್ವರೂಪ, ನಾನಾ ವಿಚಾರಗಳ ಮೂಲಕ ಭಕ್ತರನ್ನು ಎಚ್ಚರಿಸಿದ್ದಾರೆ. ಅಧ್ಯಾತ್ಮ ಸಾಧನೆ ಮಾಡಲು ಬಯಸಿದ ಶಿಷ್ಯನ ಮೊದಲ ಗುರಿಯೆಂದರೆ ಉತ್ತಮ ಜ್ಞಾನಿಯಾದ ಗುರುವನ್ನು ಆಶ್ರಯಿಸಬೇಕು. ಅಂತಹ ಸಾಧನೆಯನ್ನು ಬೋಧಿಸುವ ಗುರು ಸಿದ್ಧಪುರುಷನಾಗಿರಬೇಕು. ಯೋಗದ ವಿಚಾರವನ್ನು ಓದಿ ತಿಳಿದುಕೊಂಡಿದ್ದರೆ ಸಾಲದು, ಸಾಧನೆಯ ಮಾರ್ಗವನ್ನು ಅನುಭವಿಸಿ ತಪಃಸಿದ್ಧಿ ಪಡೆದಿರಬೇಕು. ಶಿಷ್ಯನನ್ನು ಉದ್ಧರಿಸುವ ಕಾರುಣ್ಯಗುರು ಆಗಿರಬೇಕು ಎಂದರು.

ಅಂತರಂಗ ಎಂದರೆ ಮನಸ್ಸಿನ ಶುದ್ಧಿ

ಶಿಷ್ಯನ ಅಂತರಂಗ ಶುದ್ಧಿಯನ್ನು ಮಾಡುವುದು ಗುರುವಿಗೆ ದೊಡ್ಡ ಹೊಣೆ. ಧ್ಯಾನ ಮಾಡಬಹುದು, ಪ್ರಾಣಾಯಾಮಗಳಿಂದ ಒಳನೋಟದ ದೃಷ್ಟಿಯೂ ಬರಬಹುದು. ಆದರೆ, ಅಂತರಂಗದ ಶುದ್ಧಿಯಾಗುವುದು ಬಹಳ ಕಷ್ಟ. ಅಂತರಂಗ ಎಂದರೆ ಮುಖ್ಯವಾಗಿ ಮನಸ್ಸಿನ ಶುದ್ಧಿಯೇ ಆಗಿರುತ್ತದೆ. ಏನು ಮಾಡಿದರೂ ಮನಸ್ಸಿನ ಕೊಳೆ ತೊಳೆಯುವುದು ಕಷ್ಟ. ಅವಿದ್ಯೆಗಳಿಂದ ಕೂಡಿರುವ ಮನಸ್ಸನ್ನು ಹೇಗೆ ಶುದ್ಧಿಪಡಿಸಬೇಕು ಎಂಬುದು ಕಾರುಣ್ಯಗುರುವಿಗೆ ಮಾತ್ರ ತಿಳಿದಿರುತ್ತದೆ ಎಂದರು. ಅಂತರಂಗ ಶುದ್ಧಿ ಮಾಡಿದ ನಂತರ ಗುರು ಮನಸ್ಸನ್ನು ಸಾಧನೆಗೆ ಸಿದ್ಧಪಡಿಸುತ್ತಾನೆ ಎಂದರು.

ಶಿಷ್ಯ ತನ್ನಿಂದ ಸಾಧನೆ ಆಗುವುದೋ ಇಲ್ಲವೋ ಎಂದು ಕಳವಳಪಡುತ್ತಾ, ಭಯಪಡುತ್ತಿರುವಾಗ, ಗುರು ಶಿಷ್ಯನ ಭೀತಿಯನ್ನು ತೊಲಗಿಸುತ್ತಾನೆ. ಸಮಾಧಿಯೋಗವನ್ನು ಸಾಧಿಸಿ, ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುವೆ ಎಂದು ಭರವಸೆ ನೀಡಿ, ಗುರು ಶಿಷ್ಯನನ್ನು ಹುರಿದುಂಬಿಸುತ್ತಾನೆ ಎಂದರು.

ಪಾದಯಾತ್ರಿಗಳು ಬೆಳಗ್ಗೆ ಜಂಗಮಕೋಟೆಯನ್ನು ಬಿಟ್ಟು ದೇವಗಾನಹಳ್ಳಿ, ಈರೇಬಲ್ಲ, ತಾಟಪರ್ತಿ, ಹೊಳಪನಹಳ್ಳಿ, ಚೀಮಂಗಲ, ಮುತ್ತಕದಹಳ್ಳಿ ಮಾರ್ಗವಾಗಿ ಶ್ರೀಕ್ಷೇತ್ರ ಕೈವಾರಕ್ಕೆ ಆಗಮಿಸಿದರು. ಸದ್ಗುರು ತಾತಯ್ಯ ಅವರ ಮಂದಿರವನ್ನು ಪ್ರದಕ್ಷಿಣೆ ಮಾಡಿ ಗರ್ಭಗುಡಿಯಲ್ಲಿರುವ ತಾತಯ್ಯರ ದರ್ಶನ ಪಡೆದು, ಸಾಮೂಹಿಕ ಭಜನೆ ಮಾಡಿದರು.