ಜಿಲ್ಲೆ

ಕಲೆ ಇದ್ದಲ್ಲಿ ಕಲಾಪಗಳಿಲ್ಲ

ಮರಿದೇವ ಹೂಗಾರ

ಹುಬ್ಬಳ್ಳಿ: ಎಲ್ಲಿ ಕಲೆಗಳ ಝೇಂಕಾರ ಇರುತ್ತದೋ ಅಲ್ಲಿ ಕಲಾಪಗಳಿರುವುದಿಲ್ಲ. ಇಂಥ ಕಲೆಯನ್ನು ಶ್ರೀಮಂತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೇರಳದ ಎಡನೀರು ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಅಭಿಪ್ರಾಯಪಟ್ಟರು.

ಕಲಾ ಸುಜಯ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಲಾ ಸುಜಯದ ದಶಮಾನೋತ್ಸವ ಹಾಗೂ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಲೆ ನಿಂತ ನೀರಾಗದೇ ನಿರಂತರ ಹರಿಯಬೇಕು. ಇದರಿಂದ ಕಲೆ ಬೆಳೆದು ಮುಂದಿನ ತಲೆಮಾರುವರೆಗೆ ಮುಂದುವರಿಯಲಿದೆ. ಯುವ ಸಮಾಜ ದಾರಿ ತಪ್ಪುತ್ತಿರುವುದು ಕಾಣುತ್ತಿದ್ದೇವೆ. ಸಂಗೀತ, ಭರತನಾಟ್ಯದಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಕರ್ಷಿಸಿದರೆ ಯುವ ಜನರು ದಾರಿ ತಪ್ಪುವುದಿಲ್ಲ. ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಭಾರತೀಯ ಸಂಸ್ಕೃತಿ ಉಳಿಯಲು ಕಾರಣವಾಗುತ್ತದೆ ಎಂದರು.

ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಮಾತನಾಡಿ, ಕೆಲವರು ಸನಾತನ ಧರ್ಮ ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಭರತ ನಾಟ್ಯ, ಹಾಡಿನಂದ ಸಂಸ್ಕೃತಿ ನಮ್ಮ ಸನಾತನ ಧರ್ಮವನ್ನು ಜೀವಂತ ಇಟ್ಟಿವೆ. ನಾವೆಲ್ಲರೂ ಇಂಥ ಕಲೆ, ಸಂಸೃತಿಯನ್ನು ಪೋಷಣೆ ಮಾಡಬೇಕು ಎಂದರು.

ಕರ್ನಾಟಕ ಬ್ಯಾಂಕ್ ಡಿಜಿಎಂ ಬಿ. ಗೋಪಾಲಕೃಷ್ಣ ಸಾಮಗ ಮಾತನಾಡಿ, ಸಾಧನೆಯ ಹಿಂದೆ ತ್ಯಾಗ, ಪರಿಶ್ರಮ ಇರುತ್ತದೆ. ಆದರ್ಶ ಜೀವನ ಸಾಗಿಸುವುದರಿಂದ ಮಾತ್ರ ಮತ್ತೊಬ್ಬರಿಗೆ ಮಾದರಿಯಾಗಬಲ್ಲರು ಎಂದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಂಘದ ಹುಬ್ಬಳ್ಳಿ ಅಧ್ಯಕ್ಷ ಅನಂತಪದ್ಮನಾಭ ಐತಾಳ ಮಾತನಾಡಿ, ತಾಯಿ ಮತ್ತು ಮಗಳು ರಂಗ ಪ್ರವೇಶ ಮಾಡಿರುವುದು ಸಂತೋಷದ ವಿಷಯ. ಇವರ ನಾಟ್ಯಕ್ಕೆ ಎಲ್ಲರೂ ಮನಸೋತಿದ್ದಾರೆ. ಹುಬ್ಬಳ್ಳಿಯ ಜನರು ಇವರ ನೃತ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.

ಕಲಾವಿದೆಯರಾದ ಚೈತನ್ಯ ಉಪಾಧ್ಯಾಯ ಹಾಗೂ ಸನ್ನಿಧಿ ಪಿ. ರಾವ್ ಅವರು ‘ಕೃಷ್ಣ ಕವತ್ವಂ’ ನೃತ್ಯ ರೂಪಕ ಪ್ರದರ್ಶನದ ಮೂಲಕ ರಂಗ ಪ್ರವೇಶ ಮಾಡಿದರು.

ಕಲಾ ಸುಜಯ ಸಂಸ್ಥಾಪಕ ಸುಜಯ ಶಾನಭಾಗ, ಕಲಾವಿದರಾದ ವಿದುಷಿ ದೀಪ್ತಿ ಶ್ರೀನಾಥ, ವಿನಯ ನಾಗರಾಜನ್, ನಿತೀಶ ಅಮ್ಮಂಣಾರು, ಗೋಪಾಲ ವೆಂಕಟರಮಣ, ಬಿ. ಅರುಣಕುಮಾರ ಇತರರು ಇದ್ದರು. ವಿದುಷಿ ರೂಪಶ್ರೀ ಮಧುಸೂದನ ನಿರೂಪಿಸಿದರು.