raichur 
ಜಿಲ್ಲೆ

ಬೆಳೆಹಾನಿಗೆ ಪರಿಹಾರ ಸಿಕ್ಕಿಲ್ಲವೆಂದು ದೂರು ಬಂದರೆ ಅಧಿಕಾರಿಗಳೇ ಹೊಣೆ -ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿಕೆ

ರಾಯಚೂರು ನಮ್ಮ ಜಮೀನಿಗೆ ಯಾರು ಬಂದಿಲ್ಲ. ಸಮೀಕ್ಷೆ ಮಾಡಿಲ್ಲ. ಬೆಳೆಹಾನಿಯಾದರೂ ನಮಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಜಿಲ್ಲೆಯ ಯಾವುದೇ ಪ್ರದೇಶದ ರೈತರಿಂದ ದೂರುಗಳು ಕೇಳಿ ಬಂದರೆ ಅಧಿಕಾರಿಗಳೇ ನೇರ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಬೆಳೆ ಹಾನಿ ಕುರಿತು ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆಹಾನಿ ಜಂಟಿ ಸಮೀಕ್ಷೆ ಅಚ್ಚುಕಟ್ಟಾಗಿ ನಡೆಯಬೇಕು. ಹಾನಿಗೊಳಗಾದ ಪ್ರತಿಯೊಂದು ಜಮೀನಿಗೆ ಹೋಗಿ ಸರ್ವೆ ಮಾಡಬೇಕು. ಹಾನಿ ಅನುಭವಿಸಿದ ಪ್ರತಿಯೊಬ್ಬ ರೈತರಿಗೂ ಸಮರ್ಪಕ ಪರಿಹಾರಕ್ಕೆ ಕ್ರಮ ವಹಿಸಬೇಕು. ಜನ ಜಾನುವಾರ ಜೀವಹಾನಿ, ಮನೆ ಹಾನಿ ಪ್ರಕರಣಗಳಿಗೆ ಸಹ ಕಾಲಮಿತಿಯೊಳಗೆ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಅಧಿಕಾರಿಗಳು ಕಚೇರಿಯಿಂದ ಹೊರಬಂದು ತಂಡವಾಗಿ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಬೇಕು. ಪರಿಹಾರ ದಕ್ಕುತ್ತದೆ ಎಂದು ರೈತರಿಗೆ ವಿಶ್ವಾಸ ಬರುವ ಹಾಗೆ ಅಧಿಕಾರಿಗಳು ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು.ಕೆಲಕಡೆಗೆ ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿವೆ. ಅದಕ್ಕೆ ರಿಪ್ಲೇಸಮೆಂಟ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ನಿತೀಶ್ ಕೆ., ಮಾತನಾಡಿ,ಜಿಲ್ಲೆಯಲ್ಲಿ ಕಳೆದ ಶನಿವಾರದಿಂದಲೇ ಜಂಟಿ ಸಮೀಕ್ಷೆ ಆರಂಭವಾಗಿದೆ. ತೀವ್ರ

ಮಳೆಯಿಂದಾಗಿ, ಈಗಾಗಲೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 25,000 ಹೆಕ್ಡೇರ್ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ ಶೇ.18ರಷ್ಟು ಸಮೀಕ್ಷೆ ಆಗಿದೆ. ಇನ್ನು ಮುಂದುವರೆದಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ದದ್ದಲ್,ಬಸನಗೌಡ ತುರ್ವಿಹಾಳ,ಡಾ.ಎಸ್.ಶಿವರಾಜ ಪಾಟೀಲ್, ಹಂಪಯ್ಯ ನಾಯಕ, ಕರೆಮ್ಮ ಜಿ ನಾಯಕ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಇದ್ದರು.