ಜಿಲ್ಲೆ

ಕಾಮಗಾರಿ ಶೀಘ್ರ ಕೈಗೊಳ್ಳದಿದ್ದರೆ ಪ್ರತಿಭಟನೆ

ಸಂಕೇಶ್ವರ: ಪ್ರತಿವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಕಾಟಾಚಾರಕ್ಕೆ ರಸ್ತೆ ದುರಸ್ತಿ ಮಾಡುತ್ತಾರೆ ಹೊರತು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಯುವ ಮುಖಂಡ ಸುನೀಲ ಪಾಟೀಲ ಆಗ್ರಹಿಸಿದರು.

ಪಟ್ಟಣದ ಹೊಸಓಣಿಯ ರಸ್ತೆ ಹಾಗೂ ಚರಂಡಿ ಸಮಸ್ಯೆ ಸೇರಿ ಸ್ಥಳೀಯ ನಿವಾಸಿಗಳ ಸಮಸ್ಯೆ ಶೀಘ್ರವೇ ಬಗೆಹರಿಸಬೇಕೆಂದು ಸೋಮವಾರ ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯ ವಾರ್ಡ್ ಸಂಖ್ಯೆ 3ರ ಹೊಸಓಣಿಯಲ್ಲಿ ಚರಂಡಿ ಹಾಗೂ ರಸ್ತೆ ಇಲ್ಲದೆ ವರ್ಷದಿಂದ ಸಾರ್ವಜನಿಕರು ನಿತ್ಯ ಪರದಾಡುತ್ತಿದ್ದಾರೆ. ಶೀಘ್ರ ಕಾಮಗಾರಿ ಕೈಗೊಳ್ಳದಿದ್ದರೆ ರಸ್ತೆ ತಡೆದು ಪುರಸಭೆ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ದೌಡಾಯಿಸಿದ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಅವರನ್ನು ಸುತ್ತುವರಿದ ಪ್ರತಿಭಟನಾಕಾರರು ಶಾಸಕರು ಹಾಗೂ ಪುರಸಭೆ ಅಧ್ಯಕ್ಷರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಮಾಜಿ ಅಧ್ಯಕ್ಷ ಶ್ರೀಕಾಂತ ಹತನೂರಿ, ಸದಸ್ಯರಾದ ಅಜಿತ್ ಕರಜಗಿ, ಪ್ರಮೋದ ಹೊಸಮನಿ, ಸಚಿನ ಭೋಪಳೆ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಸಿಗೊಳಿಸಲು ಪ್ರಯತ್ನಿಸಿದರು.

ಹಣ ನೀಡಿ: ಬೇಸತ್ತು ಅಲ್ಲಿಯ ನಿವಾಸಿ ವಿನೋದ ಪವಾರ ತಮ್ಮ ಮನೆ ಎದುರು ಸ್ವಂತ ಚರಂಡಿ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಪುರಸಭೆ ವತಿಯಿಂದ ಹಣ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಿವಾಜಿ ಹತ್ರೋಟಿ, ವಿನೋದ ಪವಾರ, ಆನಂದ ಸಾರವಾಡಿ, ಅಕ್ಷಯ ಸಾವಗಾವಿ, ಸುಮಿತ ಬೆಳಕೂಡೆ, ಮಲ್ಲಿಕಾರ್ಜುನ ಬಾಗೇವಾಡಿ, ಕಲ್ಲಪ್ಪ ಗಸ್ತಿ, ಶಿವಾನಂದ ಸಾರವಾಡಿ ಇತರರಿದ್ದರು.