ಮಹಾಲಿಂಗಪುರದ ಜೇಸಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಕಾನಿಪ ಸಂಘದಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಎಸ್. ಎಸ್. ಈಶ್ವರಪ್ಪಗೋಳ ಉದ್ಘಾಟಿಸಿದರು.ಮಹೇಶ ಮನ್ನಯ್ಯನವರಮಠ, ಶಿಕ್ಷಕ ಡಿ.ವಿ.ಹಿರೇಮಠ ಇದ್ದರು. 
ಜಿಲ್ಲೆ

ದೃಷ್ಟಿ ಬದಲಾದರೆ ದೃಶ್ಯ ಬದಲಾದೀತು

ಗಿರೀಶ ಸಗರ

ಮಹಾಲಿಂಗಪುರ: ಮಾಡುವ ಕಾಯಕದಲ್ಲಿ ಶಿಸ್ತು, ಪ್ರೀತಿ ಮತ್ತು ಚಿತ್ತ ಇರಬೇಕು. ಪ್ರೀತಿ ಮತ್ತು ಚಿತ್ತ ಇಲ್ಲದೆ ಮೃಷ್ಟಾನ್ನ ಭೋಜನ ಮಾಡಿದರೂ ಅದು ವಿಷವಾಗಿ ಪರಿಣಮಿಸುತ್ತದೆ ಎಂದು ಕುಂಚನೂರ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಡಿ.ವಿ.ಹಿರೇಮಠ ಹೇಳಿದರು.

ಸ್ಥಳೀಯ ನವಚೇತನ ಶಿಕ್ಷಣ ಸಂಸ್ಥೆಯ ಜೇಸಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಿಮ್ಮ ಪರೀಕ್ಷೆಗೆ ಇನ್ನು 42 ದಿನಗಳು ಮಾತ್ರ ಬಾಕಿ ಇವೆ.

ಈ ದಿನಗಳಲ್ಲಿ ತಪಸ್ಸಿನಂತೆ ಅಭ್ಯಾಸ ಮಾಡಿ. ಒಬ್ಬ ಕ್ರಿಕೆಟ್ ಆಟಗಾರನಿಗೆ ಪ್ರತಿ ಚೆಂಡು ಎಷ್ಟು ಮಹತ್ವ ಇರುತ್ತದೆಯೋ ನಿಮಗೂ ಈಗಿನ ಪ್ರತಿ ದಿನ ಅಷ್ಟೇ ಮಹತ್ವ ಇರುತ್ತದೆ. ನೀವು ಉನ್ನತ ಮಟ್ಟದ ಸಾಧನೆಗೈದರೆ ಯಾರೊಬ್ಬರೂ ಅದನ್ನು ಬ್ರೇಕ್ ಮಾಡಲು ಸಾಧ್ಯವಿಲ್ಲ. ಅದನ್ನು ಸರಿಗಟ್ಟಬಲ್ಲರಷ್ಟೆ . ಅಂತಹ ಸಾಧನೆ ನಿಮ್ಮದಾಗಬೇಕು ಎಂದರು.

ಅವಮಾನ, ನೋವು ಮತ್ತು ಸಂಕಟಗಳಿಂದ ನಾವು ಗಟ್ಟಿಯಾಗಬೇಕು. ನಿಮ್ಮ ದೃಷ್ಟಿ ಬದಲಾದರೆ ದೃಶ್ಯ ಬದಲಾದೀತು. ನಿಮ್ಮ ಮನಸ್ಸು ನಿಮ್ಮ ಮಾತು ಕೇಳಿದಾಗ ನಿಮ್ಮ ಪಯಣ ಯಶಸ್ಸಿನ ಕಡೆ ಚಲಿಸುತ್ತದೆ.

ಜನನ ಶುದ್ಧಿಯಾಗಿರದಿದ್ದರೂ ಪರವಾಗಿಲ್ಲ ಮರಣ ಶುದ್ಧಿಯಾಗಿರಬೇಕು. ನಿಮ್ಮ ಕುರೂಪತೆ, ಬಡತನ, ದೌರ್ಬಲ್ಯ ಕಿತ್ತೆಸೆಯುವ ಶಕ್ತಿ ಶಿಕ್ಷಣಕ್ಕಿದೆ. ತ್ಯಾಗವಿಲ್ಲದವರಿಗೆ ಜಾಗವಿಲ್ಲ. ದೋಣಿ ಬದಲಿಸಬೇಕಿಲ್ಲ. ದಿಕ್ಕು ಬದಲಿಸಿದರೆ ದಡ ಸೇರುವಿರಿ ಎಂದರು.

ಸಿಆರ್‌ಪಿ ಎಸ್.ಎನ್.ಬ್ಯಾಳಿ ಮಾತನಾಡಿ, ಯಾರೂ ನಿಮ್ಮ ಹಣೆಬರಹ ಬದಲಿಸರಾರರು. ಆಸಕ್ತಿ ಮತ್ತು ಹವ್ಯಾಸ ಹಣೆಬರಹವನ್ನು ಬದಲಿಸುತ್ತವೆ. ನಮ್ಮ ಎಲ್ಲ ಸ್ಥಿತಿಗತಿಗಳಿಗೂ ನಾವೇ ಕಾರಣ. ಸುಮ್ಮನೆ ವಿಧಿಯನ್ನು ಶಪಿಸುವದು ತರವಲ್ಲ.

ನೀವು ದೃಢ ಸಂಕಲ್ಪದಿಂದ ಮುನ್ನುಗ್ಗಿದರೆ ಯಾರೂ ನಿಮ್ಮನ್ನು ತಡೆಯಲಾರರು. ತದೇಕಚಿತ್ತದಿಂದ ಅಭ್ಯಾಸ ಮಾಡಿ ಹೆತ್ತ ತಂದೆ-ತಾಯಿ, ವಿದ್ಯೆ ಧಾರೆಯೆರೆದ ಶಾಲೆಗೆ ಸಂತೋಷ ನೀಡಿದರೆ ಅದುವೇ ನೀವು ಅವರಿಗೆ ಕೊಡುವ ಒಲವಿನ ಉಡುಗೊರೆ ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ಸ್ಥಾನ ಪಡೆದ ವಿದ್ಯಾರ್ಥಿನಿಯರಾದ ಸವಿತಾ ಹುದ್ದಾರ, ಪಲ್ಲವಿ ಸಿಂಗಾಡಿ, ಮೇಘಾ ಬೆಳಕೂಡ ಅವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ಎಸ್.ಎಸ್.ಈಶ್ವರಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಪತ್ರಕರ್ತರಾದ ಚಂದ್ರಶೇಖರ ಮೋರೆ, ಇಲಾಹಿ ಜಮಖಂಡಿ ಇದ್ದರು.

ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು. ಶಿಕ್ಷಕಿ ಎಸ್.ಎನ್.ಹೊಸಕೇರಿ ವಂದಿಸಿದರು.