ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ರೈತ ಸಮಾವೇಶವನ್ನು ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಶಾಸಕ ದರ್ಶನ ಪುಟ್ಟಣ್ಣಯ್ಯ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ, ಸಂಘದ ಪದಾಕಾರಿಗಳಾದ ಜೆ.ಎಂ.ವೀರಸಂಗಯ್ಯ, ಪ್ರಸನ್ನ ಗೌಡ, ರವಿಕಿರಣ ಪೂಣಚ್ಚ, ನಾಗರತ್ನಮ್ಮ ಪಾಟೀಲ್, ನೇತ್ರಾವತಿ ಇದ್ದರು. 
ಜಿಲ್ಲೆ

ರೈತರ ಸಮಸ್ಯೆ ನಿವಾರಣೆಯಾದರೆ ದೇಶ ಉದ್ಧಾರ

ರಾಯಚೂರು
ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿದಾಗ ಮಾತ್ರ ದೇಶ ಉದ್ಧಾರವಾಗಲು ಸಾಧ್ಯವಾಗಲಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ರೈತ ಸಮಾವೇಶ, ಕೆ.ಎಸ್.ಪುಟ್ಟಣಯ್ಯ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಕೆಲವೇ ಕೆಲವು ಕೈಗಾರಿಕೋದ್ಯಮಿಗೆ ಅನುಕೂಲ ಕಲ್ಪಿಸುತ್ತಿದ್ದು, ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದು,ರೈತರ ಸಾಲ ಮನ್ನಾ ಮಾಡಲು ಮುಂದೆ ಬರುತ್ತಿಲ್ಲ.
ರೈತರು ಬರದಿಂದ ಸಂಕಷ್ಟದಲ್ಲಿದ್ದು ಕೇಂದ್ರ ಸರ್ಕಾರ ಪರಿಹಾರಕ್ಕೆ ನಯಾಪೈಸೆಯನ್ನು ನೀಡಿಲ್ಲ. ರಾಜ್ಯ ಸರ್ಕಾರ ಮಾತ್ರ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ.ಗಳನ್ನು ಹಾಕುವ ಮೂಲಕ ಅಲ್ಪ ಮಟ್ಟಿಗೆ ಸಹಾಯ ಮಾಡಿದೆ. ರೈತಪರ ಸಂಘಟನೆಗಳು ರೈತರ ಸಮಸ್ಯೆ ನಿವಾರಣೆಗೆ ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸಮ್ಮೇಳನ ನಿರ್ಣಯಗಳನ್ನು ಮಂಡಿಸಿ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆ ಬೇರು ಬಿಟ್ಟಿದ್ದರೂ ಸಮಾಜ ಚಳುವಳಿಗಾರರನ್ನು ನೆನಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೋಮುವಾದ ಬೆಳೆಯುತ್ತಿದ್ದು, ಬಂಡವಾಳಶಾಹಿಗಳು ವಿಜೃಂಭಿಸುತ್ತಿದ್ದಾರೆ.
ಅಂಬೇಡ್ಕರ್‌ರನ್ನು ಯಾರೂ ಎಂದು ಕೇಳುತ್ತಿದ್ದವರು ಇಂದು ನಮ್ಮವರು ಎಂದು ಹೇಳುತ್ತಿದ್ದಾರೆ. ರೈತ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಪುಟ್ಟಣ್ಣಯ್ಯ ಬದ್ಧತೆಯಿದ್ದ ಮನುಷ್ಯರಾಗಿದ್ದ ಕಾರಣಕ್ಕೆ ಅವರು ದೈಹಿಕವಾಗಿ ಇಲ್ಲವಾಗಿದ್ದರೂ ಅವರು ಮಾನಸಿಕವಾಗಿ ಬದುಕಿದ್ದಾರೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ರಾಜ್ಯದ ಬಹುತೇಕ ತಾಲೂಕುಗಳು ಬರ ಪೀಡಿತವಾಗಿದ್ದು, ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಳ್ಳುವುದರ ಜತೆಗೆ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು. ಸಲ್ ಭೀಮಾ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಅಕಾರಿಗಳು ವಿಮಾ ಕಂಪನಿಗಳ ಜತೆಗೆ ಶಾಮೀಲಾಗಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ, ಸಂಘದ ಪದಾಕಾರಿಗಳಾದ ಜೆ.ಎಂ.ವೀರಸಂಗಯ್ಯ, ಪ್ರಸನ್ನ ಗೌಡ, ರವಿಕಿರಣ ಪೂಣಚ್ಚ, ನಾಗರತ್ನಮ್ಮ ಪಾಟೀಲ್, ನೇತ್ರಾವತಿ, ಪ್ರಭಾಕರ ಪಾಟೀಲ್, ಹರವಿ ನಾಗನಗೌಡ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪದಾಕಾರಿಗಳು ಉಪಸ್ಥಿತರಿದ್ದರು.