ಜಿಲ್ಲೆ

ಸಮಸ್ಯೆ ಬಗೆಹರಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ

ಮೈಸೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಮತ್ತು ಬಿಲ್ ಕಲೆಕ್ಟರ್‌ಗಳ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸದಿದ್ದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಡಗೌಡ ಎಚ್ಚರಿಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಗರದ ಶ್ರೀವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್‌ಗಳ ವಿಭಾಗ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮನ್, ಬಿಲ್ ಕಲೆಕ್ಟರ್ ಮುಂತಾದ ಹುದ್ದೆಗಳನ್ನು ಸರ್ಕಾರ ಹೊರ ಗುತ್ತಿಗೆಗೆ ನೀಡುವ ಹುನ್ನಾರ ನಡೆಸುತ್ತಿದೆ. ಇದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದಿಂದ ನೇರ ವೇತನ ಪಡೆಯುತ್ತಿರುವ 48 ಸಾವಿರ ಗ್ರಾಮ ಪಂಚಾಯಿತಿ ನೌಕರರು ಮತ್ತು 13 ಸಾವಿರ ಪಂಚಾಯಿತಿ ಮೂಲಕ ವೇತನ ಪಡೆಯುತ್ತಿರುವ ನೌಕರರ ಕೆಲಸಕ್ಕೆ ಕುತ್ತು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದದರು.

ಆರ್‌ಡಿಪಿಆರ್ ಇಲಾಖೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಕರ್ಕ್‌ಗಳಿಗೆ ಮಾಸಿಕ 3 ಸಾವಿರ ರೂ.ವೇತನ ಹೆಚ್ಚಿಸುವ ಬಗ್ಗೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸಿದೆ. ಆದರೇ ಆ ಕಡತ ಇನ್ನೂ ಹಣಕಾಸು ಇಲಾಖೆಯ ಅನುಮೋದನೆ ಪಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೇತನ ಹೆಚ್ಚಿಸುವ ಜತೆಗೆ ನೌಕರರಿಗೆ ನಿವೃತ್ತರಾದವರಿಗೆ 6 ಸಾವಿರ ರೂ.ಪಿಂಚಣಿ ಕೊಡುವುದು, ಗ್ರಾಮ ಪಂಚಾಯಿಗಳ ಉನ್ನತೀಕರಣ ಕಾರ್ಯಗತ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಈ ಬಗ್ಗೆ ನಮ್ಮ ಮುಂದಿನ ಹೋರಾಟವನ್ನು ಮುಂಬರುವ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಸರ್ಕಾರ ಕೂಡಲೇ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್, ಬಿಲ್ ಕಲೆಕ್ಟರ್, ಕ್ಲರ್ಕ್ ಮತ್ತು ವಾಟರ್‌ಮನ್‌ಗಳ ಉದ್ಯೋಗಕ್ಕೆ ಯಾವುದೇ ರೀತಿಯ ಅಭದ್ರತೆ ಕಾಡದಂತೆ ಕ್ರಮ ಜರುಗಿಸಬೇಕೆಂದು ಹೇಳಿದರು.

ರಾಜ್ಯದಲ್ಲಿ ಇನ್ನೂ ಎರಡು ವಿಭಾಗ ಮಟ್ಟದ ಸಭೆ ನಡೆಯಲಿದೆ. ಬಳಿಕ ರಾಜ್ಯ ಸಮಿತಿ ಸಭೆ ನಡೆಯಲಿದ್ದು, ಈಗಾಗಲೇ ನಡೆದಿರುವ ಸಭೆಗಳ ತೀರ್ಮಾನದಂತೆ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ವಿಧಾನಸೌಧ ಮುತ್ತಿಗೆ ಹಾಕುವುದು ಮತ್ತು ಸಂಬಂಧಪಟ್ಟ ಇಲಾಖೆಗಳ ಸಚಿವರ ಮನೆಗಳಿಗೆ ಮುತ್ತಿಗೆ ಹಾಕುವುದರ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್. ಭರತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಸಹ ಕಾರ್ಯದರ್ಶಿ ಬಸವರಾಜು, ಚಾಮರಾಜ ನಗರ ಜಿಲ್ಲಾ ಅಧ್ಯಕ್ಷ ಸಿದ್ದರಾಜು, ಮೈಸೂರು ಜಿಲ್ಲಾ ಖಜಾಂಚಿ ಲೋಕೇಶ್ ಇತರರು ಇದ್ದರು.