ಮೈಸೂರು: ಚಳವಳಿಗಳು ಜೀವಂತವಾಗಿದ್ದರೆ ಸರ್ಕಾರವೂ ಜೀವಂತವಾಗಿರುತ್ತದೆ. ಹಾಗಾಗಿ ಜನಪರವಾದ ಚಳವಳಿಗಳು ನಡೆಯುತ್ತಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಗಳು ಬಂದ್ ಆಗುತ್ತಿವೆ. ಇವುಗಳ ವಿರುದ್ಧ ಚಳವಳಿಗಾರರು ಧ್ವನಿ ಎತ್ತಬೇಕು ಎಂದರು.
ಪ್ರಸ್ತುತ ರಾಜಕಾರಣ ತನ್ನ ಗಾಂಭೀರ್ಯವನ್ನು ಕಳೆದುಕೊಳ್ಳುತ್ತಿದೆ. ಸಮಾಜ ಸಹ ಗಾಂಭೀರ್ಯತೆಯನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಚಳವಳಿಗಾರರು ಈ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಅಖಿಲ ಕರ್ನಾಟಕ ಬ್ರಾಹ್ಮಣರ ಮಹಾಸಭಾ ವಲಯ ಉಪಾಧ್ಯಕ್ಷ ಡಾ.ಬಿ.ಆರ್. ನಟರಾಜ್ ಜೋಯ್ಸ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್.ಆರ್. ರವಿಕುಮಾರ್, ಸಮಾಜ ಸೇವಕ ರಾಮಚಂದ್ರ, ಅಖಿಲ ಭಾರತ ವೀರಶೈವ ಮಹಾಸಭಾ ಖಜಾಂಚಿ ವರುಣ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಡೀನ್ ಡಾ.ಎನ್. ಲಕ್ಷ್ಮೀ, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮುಗೂರು ನಂಜುಂಡಸ್ವಾಮಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹಾಗೂ ಇತರರು ಇದ್ದರು.