ಅರಸೀಕೆರೆ: ದೇಶ ರಕ್ಷಣೆಗೆ ಬಹುಸಂಖ್ಯಾತರು ಒಗ್ಗೂಡದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಹಿರಿಯ ನಾಗರಿಕರ ವೇದಿಕೆ ಮುಖಂಡ ಶ್ರೀಕಾಂತ್ ನವಲಗುಂದ ಹೇಳಿದರು.
ವಕ್ಫ್ ಆಸ್ತಿ ಕಬಳಿಕೆ ಸಂಬಂಧ ನಗರದ ಶ್ರೀರಾಮ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀತಿ, ನಿಯಮ, ಲಂಗು-ಲಗಾಮು ಇಲ್ಲದ ವಕ್ಫ್ ಬೋರ್ಡ್ ವಿಜಯಪುರ, ಚಿತ್ರದುರ್ಗ, ಯಾದಗಿರಿ, ಮಂಡ್ಯ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಕಂಡ ಕಂಡಲ್ಲಿ ಆಸ್ತಿ ನಮ್ಮದು ಎಂದು ನಾಮಫಲಕ ಅಳವಡಿಸುತ್ತಿರುವುದು ಆತಂಕಕಾರಿ ಸಂಗತಿ. ಆರಂಭದಲ್ಲಿ ರೈತರ ಜಮೀನು ಕಬಳಿಕೆ ಮಾಡಲು ಹೊರಟಿದ್ದು, ಪಹಣಿಗಳಲ್ಲಿ ವಕ್ಫ್ ಎಂದು ನಮೂದು ಮಾಡಿರುವುದು ಬಯಲಾಗಿದೆ. ಸಾಲದೆಂಬಂತೆ ಮಠ, ಶಾಲೆ, ದೇಗುಲಗಳ ಮೇಲೂ ಕೆಂಗಣ್ಣು ಬೀರಿದೆ. ಇಂತಹ ಸಂದಿಗ್ಧ ಸಮಯದಲ್ಲಿ ನನಗೇಕೆ ಎನ್ನುವ ಮನೋಧೋರಣೆಯಿಂದ ಹೊರಬಂದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ದೇಶದ ಬಹುಸಂಖ್ಯಾತರ ರಕ್ಷಣೆ ಜತೆಗೆ ಆಸ್ತಿ, ಪಾಸ್ತಿ ಉಳಿಸಲು ಸಂಘಟಿತ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ಸಂಘಪರಿವಾರದ ಹಿರಿಯ ಮುಖಂಡ ಶಿವಶಂಕರ್ ಮಾತನಾಡಿ, ವಕ್ಫ್ ಜನವಿರೋಧಿ ಎಂಬುದನ್ನು ಮನೆ ಮನೆಗೆ ತಲುಪಿಸಿ ಸಂಭವನೀಯ ಅಪಾಯ ತಡೆಯಬೇಕಿದೆ. ಎಲ್ಲವನ್ನೂ ಸಹಿಸಿಕೊಳ್ಳುವ ಮನೋಧರ್ಮ ಬದಲಾಗಬೇಕು. ಈ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು ಎಂದು ಹೇಳಿದರು.
ರೈತಸಂಘದ ಪದಾಧಿಕಾರಿಗಳು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.