ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಶನಿವಾರ ಉದ್ಘಾಟಿಸಿದರು. ಆಯರಹಳ್ಳಿ ಪ್ರಭಾಕರ್, ಎಂ.ಜೆ.ದಿವಾಕರ್, ಹನುಮಂತೇಗೌಡ, ಗಿರೀಶ್, ಶಿವಣ್ಣ, ಶಕುಂತಲಾ ನಂಜುಂಡಸ್ವಾಮಿ, ಸುಮತಿ ರಂಗೇಗೌಡ, ಎಚ್.ಎಂ.ಮಧು ಇದ್ದರು.  
ಜಿಲ್ಲೆ

ರೈತರ ಬದುಕು ಹಸನಾದರೆ ದೇಶ ಪ್ರಗತಿ

ಹಿರೀಸಾವೆ: ಹಗಲಿರುಳು ಎನ್ನದೆ ಬೆವರು ಸುರಿಸಿ ಅನ್ನ ನೀಡುವ ರೈತರ ಬದುಕು ಹಸನಾದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ರೈತ ವರ್ಗದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದರು.

ಕಳೆದ ವರ್ಷ ಅತಿವೃಷ್ಟಿ ಪರಿಸ್ಥಿತಿ ನಿರ್ಮಾಣಗೊಂಡ ಪರಿಣಾಮ ಯಾವುದೇ ಬೆಳೆಗಳು ರೈತನ ಕೈ ಸೇರಲಿಲ್ಲ. ಆದರೆ ಈ ಬಾರಿಯೂ ವಾಡಿಕೆಯಂತೆ ಮಳೆ ಇಲ್ಲದೆ ಅನಾವೃಷ್ಟಿ ಎದುರಾಗಿ ಎಲ್ಲ ಬೆಳೆಗಳು ಒಣಗಿದ್ದು, ರೈತ ವರ್ಗದ ಕೈ ಹಾಗೂ ಕಣಜ ಬರಿದಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ಎಲ್ಲ ಬೆಳೆಗಳಿಗೂ ಅಗತ್ಯ ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಇನ್ನು ತೆಂಗು ಹಾಗೂ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಉತ್ತಮ ದರದೊಂದಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.

ಮತಿಘಟ್ಟ ಸಂಘದ ವತಿಯಿಂದ 1249 ಷೇರುದಾರ ಸದಸ್ಯರಿಗೆ ಒಟ್ಟು 9.52 ಕೋಟಿ ರೂ. ಸಾಲ ಸೌಲಭ್ಯವನ್ನು ಶೂನ್ಯ ಬಡ್ಡಿ ದರದಲ್ಲಿ ಕಲ್ಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ 99 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮತಿಘಟ್ಟ ಗ್ರಾಮದ ಎಸ್ಸಿ, ಎಸ್ಟಿ ಸಮುದಾಯ ಭವನದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಲ್ಲದೆ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಿಸಿ ವಾರದಲ್ಲಿ 2-3 ದಿನ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ಗ್ರಾಪಂ ಉಪಾಧ್ಯಕ್ಷ ರಮೇಶ್, ಸಂಘದ ಅಧ್ಯಕ್ಷ ಆಯರಹಳ್ಳಿ ಪ್ರಭಾಕರ್, ಉಪಾಧ್ಯಕ್ಷ ಎಂ.ಜೆ.ದಿವಾಕರ್, ನಿರ್ದೇಶಕರಾದ ಹನುಮಂತೇಗೌಡ, ಗಿರೀಶ್, ಶಿವಣ್ಣ, ಶಕುಂತಲಾ ನಂಜುಂಡಸ್ವಾಮಿ, ಸುಮತಿ ರಂಗೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಮಧು, ಪ್ರಮುಖರಾದ ಹಿರೀಸಾವೆ ಮಹೇಶ್, ರವಿಕುಮಾರ್, ಧನಂಜಯ, ನಟರಾಜ್, ನಿವೇಶನ ದಾನಿಗಳ ಕುಟುಂಬ ವರ್ಗ ಹಾಗೂ ಗ್ರಾಮಸ್ಥರು ಇದ್ದರು.