ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಯಶೋದಾ ರಾಗೌ ಅವರ ಸ್ಮತಿ ಸಂಪುಟ ನೀಲಿ ಬಾನಿನ ನಕ್ಷತ್ರ ಗ್ರಂಥ ಬಿಡುಗಡೆ ಮಾಡಲಾಯಿತು. ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ, ಪ್ರೊ.ಬಿ.ಜಯಪ್ರಕಾಶಗೌಡ, ರಾಗೌ, ಯಶೋದಾ, ಎನ್.ಉಷಾರಾಣಿ, ಎಸ್.ಬಿ.ಶಂಕರಗೌಡ, ಮ.ರಾಮಕೃಷ್ಣ, ಡಾ.ಎನ್.ಎಸ್.ದೇವಿಕಾ, ಡಾ.ಕೆಂಪಮ್ಮ ಇದ್ದರು. 
ಜಿಲ್ಲೆ

ಪಾಠ ಕಲಿಯದಿದ್ದರೆ ಸರ್ವನಾಶ ನಿಶ್ಚಿತ

ಲೋಕೇಶ್ ಮನು. ಡಿ

ಮಂಡ್ಯ: ಮಾಡಿದ ತಪ್ಪುಗಳಿಂದ ಪಾಠ ಕಲಿಯದಿದ್ದರೆ ಮನುಷ್ಯ ಸರ್ವನಾಶವಾಗುವುದು ನಿಶ್ಚಿತ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಭಾನುವಾರ ಆಯೋಜಿಸಿದ್ದ ಸಾಹಿತಿ ರಾಗೌ ಅವರ ಪತ್ನಿ ಯಶೋದಾ ರಾಗೌ ಅವರ ಸ್ಮತಿ ಸಂಪುಟ ನೀಲಿ ಬಾನಿನ ನಕ್ಷತ್ರ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆಲ್ಲ ರೋಬಾಟ್‌ಗಳು ಕಂಪ್ಯೂಟರ್, ಮೊಬೈಲ್ ರೂಪದಲ್ಲಿದ್ದವು. ಆದರೆ ಪ್ರಸ್ತುತದಲ್ಲಿ ಸುದ್ದಿಗಳನ್ನು ಓದುತ್ತಿವೆ ಹಾಗೂ ಪ್ರವಚನ ನೀಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಮನುಷ್ಯರ ರೂಪದಲ್ಲಿ ರೋಬಾಟ್‌ಗಳು ಆತನ ಎಲ್ಲ ಕೆಲಸಗಳನ್ನು ಆವರಿಸಿಕೊಂಡಿವೆ. ಹೀಗಾಗಿ ನಿಮ್ಮ ಪ್ರಜ್ಞೆಯನ್ನು ವಿಕಾಸಗೊಳಿಸುವುದು ಮುಖ್ಯವಾಗಬೇಕು, ಇಲ್ಲವಾದರೆ ಸರ್ವನಾಶವಾಗುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃತಿ ಬಿಡುಗಡೆ ಮಾಡಿದ ನಿವೃತ್ತ ಪ್ರಾಧ್ಯಾಪಕಿ ಎನ್.ಉಷಾರಾಣಿ ಮಾತನಾಡಿ, ನೀಲಿ ಬಾನಿನ ನಕ್ಷತ್ರ ಗ್ರಂಥ ಬಿಡುಗಡೆ ಕಾರ್ಯಕ್ರಮವು ಮೌಲ್ಯಯುತವಾಗಿದೆ. ರಾಗೌ ದಂಪತಿ ಸಮಾಜದಲ್ಲಿ ವಿಚಾರವನ್ನು ಮುಂದಿಡಲು ತನ್ನ ಮಗಳ ಕಾಲಾನಂತರ ಮೌನದಿಂದ ತೋರಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಕೆಲಸ ಶ್ಲಾಘನೀಯವಾದುದು. ಕಾರ್ಯಕ್ರಮವೇ ಒಂದು ದುಃಖವಾಗಿ ಸಂಭವಿಸಿರುವುದನ್ನು ನಾವು ರಾಗೌ ಅವರ ದಂಪತಿ ಕಣ್ಣಿನಲ್ಲಿ ಕಾಣುತ್ತಿದ್ದೇವೆ. ಅದು ಯಾರಿಗೂ ತಿಳಿಯದ್ದಾಗಿದೆ. ಒಟ್ಟಿನಲ್ಲಿ ಶೋಕವನ್ನು ಗೆಲ್ಲುವುದು ಕೂಡ ಕಷ್ಟದ ಕೆಲಸ ಎಂದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಹಿರಿಯ ಸಾಹಿತಿ ರಾಗೌ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ, ಸಾಹಿತಿ ಮ.ರಾಮಕೃಷ್ಣ, ಪ್ರಾಧ್ಯಾಪಕರಾದ ಡಾ.ಎನ್.ಎಸ್.ದೇವಿಕಾ, ಡಾ.ಕೆಂಪಮ್ಮ ಇದ್ದರು.