ಬಾಳೆಹೊನ್ನೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆಲೋಚನೆ, ಚಿಂತನೆ ಮಾಡಿ ಸಾಧಿಸ ಬೇಕು ಎಂದು ಜೇಸಿಐ ವಲಯ 14ರ ತರಬೇತಿ ವಿಭಾಗದ ನಿರ್ದೇಶಕ ಎಚ್.ಆರ್.ಪ್ರಶಾಂತ್ ಹೇಳಿದರು.
ರೇಣುಕನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿ, ಇಂದಿನ ಯುವಜನರು ಜೀವನದಲ್ಲಿ ಉತ್ತಮ ವಿಚಾರಗಳನ್ನು ತಿಳಿದು ಅನುಸರಿಸಿಕೊಂಡು ಹೋದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಹಲವು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂದು ಸಮರ್ಪಕವಾಗಿ ತಿಳಿದುಕೊಳ್ಳದೆ ಮುಂದಿನ ಶಿಕ್ಷಣದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಲವು ಯುವಕರ ಮನೆಗಳಲ್ಲಿನ ಪರಿಸ್ಥಿತಿ ವಿಭಿನ್ನವಾಗಿದ್ದು, ಜೀವನದ ಮುಂದಾಲೋಚನೆ ಇಲ್ಲದೆ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮುಂದಿನ ಜೀವನವನ್ನು ಕಷ್ಟಕರ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಯೋಚನೆಗಳನ್ನು ಮಾಡುವುದರಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ತಮ್ಮ ಬುದ್ಧಿಶಕ್ತಿಗೆ ಕೆಲಸ ನೀಡಿದರೆ ಜೀವನ ಭವ್ಯ ಭವಿಷ್ಯಕ್ಕೆ ಉತ್ತಮ ವೇದಿಕೆಗಳನ್ನು ಒದಗಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಐಟಿಐ ಕಾಲೇಜು ಉಪನ್ಯಾಸಕರಾದ ಉಮೇಶ್, ಚಂದ್ರಶೇಖರ್, ಅಶೋಕ್, ರವಿರಾಜು, ಶ್ರೀನಿವಾಸ್, ಜೇಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಬಿ.ಎಚ್.ಮನುಕುಮಾರ್, ಸದಸ್ಯರಾದ ವೇದರಾಜ್ ಭಂಡಾರಿ, ಸೌಹಾರ್ದ್ ಮತ್ತಿತರರು ಇದ್ದರು.