ಜಿಲ್ಲೆ

ಸರ್ಕಾರಿ ಜಮೀನು ಅತಿಕ್ರಮಿಸಿದರೆ ಕಠಿಣ ಶಿಕ್ಷೆ, ತಹಸೀಲ್ದಾರ್ ಎಂ. ಶ್ರೀನಿವಾಸ್ ಎಚ್ಚರಿಕೆ, ಗುಡ್ಡೇಗೌಡನಚನ್ನವಳ್ಳಿಯಲ್ಲಿ ಗೋಮಾಳ ಭೂಮಿ ಪರಿಶೀಲನೆ

ತ್ಯಾಮಗೊಂಡ್ಲು: ಸರ್ಕಾರಿ ಜಮೀನನ್ನು ಯಾರಾದರೂ ಅತಿಕ್ರಮಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನೆಲಮಂಗಲ ತಹಸೀಲ್ದಾರ್ ಎಂ. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.

ತ್ಯಾಮಗೊಂಡ್ಲು ಹೋಬಳಿಯ ಗುಡ್ಡೇಗೌಡನಚನ್ನವಳ್ಳಿಯಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಕಟಾವು ಮಾಡಿ, ಜಮೀನಿ ಕಬಳಿಸಲು ಯತ್ನಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಪರಿಶೀಲನೆ ನಡೆಸಿ ಮಾತನಾಡಿದರು.

ಗುಡ್ಡೇಗೌಡಚನ್ನವಳ್ಳಿಯ ಸರ್ವೇ ನಂ.8, 12, 13 ಮತ್ತು 17 ಸರ್ಕಾರಿ ಗೋಮಾಳ ಜಾಗವಾಗಿದೆ. ಇಲ್ಲಿ ಬೆಳೆದಿದ್ದ ನೀಲಗಿರಿ ಮತ್ತಿತರ ಮರಗಳನ್ನು ರಾತ್ರೋರಾತ್ರಿ ಕೀಳಿಸಿ, ಜಮೀನು ಸ್ವಾಧೀನಪಡಿಸಿಕೊಳ್ಳಲು ಕೆಲವರು ಯತ್ನಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳು ಕಾಣೆಯಾಗಿವೆ. ಇದನ್ನು ತಡೆಗಟ್ಟಲು ಕಂದಾಯ ಇಲಾಖೆ ಅಧಿಕಾರಿಗಳು ವಿಲವಾಗಿದ್ದಾರೆ ಎಂದು ಆರೋಪಿಸಿ ನೆಲಮಂಗಲದ ಬಿಎಂಟಿಸಿ ಮಾಜಿ ನಿರ್ದೇಶಕ ಹಾಗೂ ಮಾಜಿ ಯೋಧ ಮಿಲ್ಟ್ರಿ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು.

ಇದನ್ನು ಗಮನಿಸಿದ ನೆಲಮಂಗಲ ತಹಸೀಲ್ದಾರ್ ಎಂ. ಶ್ರೀನಿವಾಸ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭೂಮಿ ಮಂಜೂರಾತಿ ಕೋರಿ ತಾವು ಸಲ್ಲಿಸಿರುವ ಅರ್ಜಿಯ ನಕಲನ್ನು ಗ್ರಾಮಸ್ಥರು ತಹಸೀಲ್ದಾರ್‌ಗೆ ತೋರಿಸಿ, ಜಮೀನು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿಕೊಂಡರು.

ಗ್ರಾಮ ಲೆಕ್ಕಿಗ ಪಿ. ಬಸವಮೂರ್ತಿ, ಸರ್ವೇಯರ್ ಕೆ.ಎಸ್. ದೇವರಾಜು, ಸಹಾಯಕ ಸಿಬ್ಬಂದಿ ಎಂ. ನಾಗರಾಜು ಮತ್ತಿತರರಿದ್ದರು.

ಯಾವುದೇ ಸಾಗುವಳಿ ನಡೆದಿಲ್ಲ: ಗುಡ್ಡೇಗೌಡಚನ್ನವಳ್ಳಿಯ ಸರ್ಕಾರಿ ಗೋಮಾಳದಲ್ಲಿ ಯಾವುದೇ ಸಾಗುವಳಿ ನಡೆದಿಲ್ಲ. ಜಮೀನು ಮಂಜೂರಾತಿಗೆ ಕೋರಿ ಯಾರಾದರೂ ಅರ್ಜಿ ಸಲ್ಲಿಸಿದ್ದರೆ, ಅದನ್ನು ಶಾಸಕರ ನೇತೃತ್ವದ ಸಮಿತಿಯಲ್ಲಿ ಇರಿಸಿ, ಚರ್ಚಿಸಲಾಗುವುದು. ಅರ್ಜಿದಾರರು ಅರ್ಹರಾಗಿದ್ದರೆ, ನಿಯಮಾವಳಿ ಪ್ರಕಾರ ಅವರಿಗೆ ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಾರಸು ಮಾಡಲಾಗುವುದು ಎಂದು ತಹಸೀಲ್ದಾರ್ ಎಂ. ಶ್ರೀನಿವಾಸ್ ಹೇಳಿದರು.