ಮುಂಡರಗಿ:ಪ್ರತಿ ವರ್ಷದಂತೆ 2025ರ ಫೆಬ್ರುವರಿಯಲ್ಲಿ ಜರುಗಲಿರುವ ಶ್ರೀಮಠದ ಜಾತ್ರೆಯನ್ನು ವ್ಯವಸ್ಥಿತವಾಗಿ ಮತ್ತು ವಿಜೃಂಭಣೆಯಿಂದ ನಡೆಸಬೇಕು. ಭಕ್ತರು ಶ್ರೀಮಠದ ಶಕ್ತಿಯಾಗಿದ್ದು, ಎಲ್ಲರೂ ಒಗ್ಗೂಡಿ ಜಾತ್ರೆಯನ್ನು ಸುಗಮವಾಗಿ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನೇತೃತ್ವ ವಹಿಸಿದ್ದ ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಾತ್ರೆಯಲ್ಲಿ ಪ್ರತಿವರ್ಷದಂತೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ, ಒಂದು ವಾರ ಪ್ರವಚನ ಹೀಗೆ... ವಿಭಿನ್ನ ಕಾರ್ಯಕ್ರಮ ಹಾಕಿಕೊಳ್ಳುವುದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಾದ ಆಯುಷ್ಮಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆಲ್ಸ್ ಕಾರ್ಡ್ ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಕಚುಸಾಪ ತಾಲೂಕಾಧ್ಯಕ್ಷ ಸಿ.ಎಸ್. ಅರಸನಾಳ ಜಾತ್ರೆ ಬಗ್ಗೆ ಮಾತನಾಡಿದರು. ಈ ವೇಳೆ ಚುಟುಕು ಭೂಷಣ ಪ್ರಶಸ್ತಿಗೆ ಭಾಜನರಾದ ಪೂಜ್ಯರನ್ನು ಭಕ್ತರು ಗುರುವಂದನೆ ಸಲ್ಲಿಸಿ ಗೌರವಿಸಿದರು. ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಆರ್.ಆರ್. ಹೆಗ್ಗಡಾಳ, ಕರಬಸಪ್ಪ ಹಂಚಿನಾಳ, ಆರ್.ಬಿ. ಡಂಬಳಮಠ, ಡಾ.ಬಿ.ಎಸ್. ಮೇಟಿ, ಮಂಜುನಾಥ ಇಟಗಿ, ಮಂಜುನಾಥ ಮುಧೋಳ, ಬಸವರಾಜ ಬನ್ನಿಕೊಪ್ಪ, ಶರಣಪ್ಪ ಬೆಲ್ಲದ, ಎಸ್.ಬಿ. ಹಿರೇಮಠ, ದೇವಪ್ಪ ಇಟಗಿ, ಗುಡದೀರಪ್ಪ ಲಿಂಗಶೆಟ್ಟರ, ಸಂಗಣ್ಣ ಲಿಂಬಿಕಾಯಿ ಯು.ಸಿ. ಹಂಪಿಮಠ, ಗಿರೀಶ ಅಂಗಡಿ, ಡಾ.ಡಿ.ಸಿ. ಮಠ, ಪಿ.ಎಂ. ಕಲ್ಲನಗೌಡರ, ಇತರರಿದ್ದರು.
ಜಾತ್ರಾ ಕಮಿಟಿ ರಚನೆ: ಜಾತ್ರಾ ಕಮಿಟಿ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ವಿ.ಜೆ. ಹಿರೇಮಠ, ಉಪಾಧ್ಯಕ್ಷರಾಗಿ ದೇವು ಹಡಪದ ಮತ್ತು ಮುದಕಪ್ಪ ಕುಂಬಾರ, ಕಾರ್ಯದರ್ಶಿಯಾಗಿ ಶಿವು ನಾಡಗೌಡ್ರ ಹಾಗೂ ಖಜಾಂಚಿಯಾಗಿ ನಾಗರಾಜ ಮುರಡಿ ಅವರು ಆಯ್ಕೆಯಾಗಿದ್ದಾರೆ.