ಮಡಿಕೇರಿ: ಸಂಸ್ಕೃತಿಯ ಅಸ್ಮಿತೆಯಾಗಿರುವ ಸಾಂಸ್ಕೃತಿಕ ಪ್ರಕಾರಗಳು ಉಳಿದ್ದಲ್ಲಿ ಆ ಜನಾಂಗದ ರಕ್ಷಣೆ ಸಾಧ್ಯ. ಈ ಹಿನ್ನೆಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಪದ್ಮಶ್ರೀ ಗೌರವಕ್ಕೆ ಭಾಜನರಾಗಿರುವ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಕರೆ ನೀಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೫೦ ವರ್ಷಗಳಿಂದ ಉಮ್ಮತಾಟ್ ಕಲಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆಯೂ ತರಬೇತಿ ನೀಡುತ್ತೇನೆ. ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾತಿ, ಧರ್ಮ ಎನ್ನದೇ ಉಮ್ಮತಾಟ್ ಕಲಿಸಿದ್ದೇನೆ. ದೇಶದ ವಿವಿಧೆಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. ಅದಲ್ಲದೆ ಬಡವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಭರಿಸಿ, ವಸತಿ ಕಲ್ಪಿಸಿದ್ದೇನೆ. ಇವೆಲ್ಲವನ್ನು ಯಾವುದೇ ಪ್ರಚಾರಕ್ಕೆ ಅಥವಾ ಪ್ರಶಸ್ತಿಗೆ ಮಾಡಿಲ್ಲ. ನನ್ನ ಆತ್ಮತೃಪ್ತಿಗೆ ಮಾಡಿದೆ. ಆದರೆ, ಇದೀಗ ಪ್ರಶಸ್ತಿ ಮೂಲಕ ತನ್ನ ಕೆಲಸವನ್ನು ಗುರುತಿಸಿರುವುದು ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಾಲ್ಯದಲ್ಲಿ ಹಿರಿಯರು ಉಮ್ಮತಾಟ್ ಮಾಡುವಾಗ ಪ್ರೇರಿಪತಳಾಗಿ ನೃತ್ಯ ಕಲಿಯಲು ಆರಂಭಿಸಿದೆ. ಮೊದಲು ನೃತ್ಯ ನಿಧಾನಗತಿಯಲ್ಲಿತ್ತು. ತಾನು ಕಲಿತ ನಂತರ ಶೈಲಿಯನ್ನು ಬದಲಾಯಿಸಿದೆ. ವೇಗ ಹೆಚ್ಚಿಸಿ, ಹಾಡಿನಲ್ಲೂ ಕೊಂಚ ಬದಲಾವಣೆ ತಂದೆ. ಮೊದಲು ತನ್ನ ಮಗಳು ಹಾಗೂ ಅವಳ ಸಹಪಾಠಿಗಳಿಗೆ ಉಮ್ಮತಾಟ್ ಕಲಿಸಲು ಆರಂಭಿಸಿದೆ. ಇದಾದ ಬಳಿಕ ಮತ್ತಷ್ಟು ವಿದ್ಯಾರ್ಥಿಗಳಿಗೆ ಕಲಿಸಬೇಕೆಂಬ ತವಕ ಹುಟ್ಟಿತು. ಗೋಣಿಕೊಪ್ಪ ಕಾವೇರಿ ಕಾಲೇಜು, ಮಡಿಕೇರಿ ಎಫ್.ಎಂ.ಸಿ. ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆರಂಭಿಸಿದೆ. ಕ್ರಮೇಣ ಬೇರೆ ಬೇರೆ ಕಡೆ ಅವಕಾಶ ದೊರೆಯಿತು.
ಕಾವೇರಿ ಕಲಾ ವೃಂದ ಎಂಬ ತಂಡ ಕಟ್ಟಿ ನೃತ್ಯ ಪ್ರದರ್ಶನ ನೀಡಲಾರಂಭಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಅಕಾಡೆಮಿಗಳು ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಟ್ಟವು. ಆನಂತರ ಒರಿಸ್ಸಾ, ಚತ್ತೀಸ್‌ಘಡ, ಜಮ್ಮು-ಕಾಶ್ಮೀರ, ಅಂಡಮಾನ್-ನಿಕೋಬರ್, ದೆಹಲಿ, ಪಾಂಡಿಚೇರಿ, ನಾಗಪುರದಲ್ಲಿ ಉಮ್ಮತಾಟ್ ಪ್ರದರ್ಶನ ನೀಡುವ ಅವಕಾಶ ದೊರೆಯಿತು. ಎಲ್ಲಾ ಕಡೆ ನಮ್ಮ ನೃತ್ಯ ಪ್ರದರ್ಶನ ಮೆಚ್ಚುಗೆ ಪಡೆದುಕೊಂಡಿತು. ಕ್ರಿಶ್ಚಿಯನ್ ಹಾಗೂ ಮುಸ್ಲಿಮ್ ಯುವತಿಯರಿಗೂ ನೃತ್ಯ ಕಲಿಸಿದ್ದೇನೆ ಎಂದು ಸ್ಮರಿಸಿಕೊಂಡರು.
ಆರ್ಥಿಕ ಸಮಸ್ಯೆಯ ನಡುವೆಯೂ ಯಾರಿಂದ ಪ್ರಾಯೋಜಕತ್ವ ಪಡೆಯದೆ ನೃತ್ಯ ಪ್ರದರ್ಶನಗಳಿಗೆ ತೆರಳುತ್ತಿದ್ದೆ. ಸಂಭಾವನೆ ರೂಪದಲ್ಲಿ ದೊರೆಯುತ್ತಿದ್ದ ಹಣದಲ್ಲಿ ಖರ್ಚು ನಿಭಾಹಿಸುತ್ತಿದೆ. ಕೆಲವೆಡೆ ಸಂಭಾವನೆ ನೀಡುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸ್ವಂತ ಹಣ ವ್ಯಹಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪ್ರದರ್ಶನ ನೀಡುತ್ತಿದ್ದೇವು. ನನಗೆ ಕುಟುಂಬ ಪೂರಕ ಸಹಕಾರ ನೀಡಿದೆ ಎಂದರು.
ಇದೇ ಸಂದರ್ಭ ಸಂಘದ ವತಿಯಿಂದ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಖಜಾಂಜಿ ಆನಂದ್ ಕೊಡಗು, ನಿರ್ದೇಶಕ ಎಚ್.ಜೆ.ರಾಕೇಶ್ ಹಾಜರಿದ್ದರು.