ಜಿಲ್ಲೆ

ಪಾಲಿಕೆ ಅಧಿಕಾರಿಗಳು ನಿರ್ಲಕ್ಷೃ ತೋರಿದರೆ ಕಠಿಣ ಕ್ರಮ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಾಗೂ ವಲಯ ಕಚೇರಿಗಳಿಗೆ ಸಮಸ್ಯೆ ಹೊತ್ತು ಬರುವವರಿಗೆ ಅಧಿಕಾರಿಗಳು ಶೀಘ್ರವೇ ಸ್ಪಂದಿಸಬೇಕು. ಇಲ್ಲವಾದರೆ, ನಿರ್ಲಕ್ಷೃ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಎಚ್ಚರಿಕೆ ನೀಡಿದರು.
ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಅವಳಿನಗರ ಅಭಿವೃದ್ಧಿ ಹಾಗೂ ಆಸ್ತಿ ತೆರಿಗೆ ಸಮಸ್ಯೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರ ಸಮಸ್ಯೆ ತಕ್ಷಣ ಪರಿಹರಿಸಲಾಗುವುದು. ಸ್ವತಃ ನಾನೇ ವಲಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಗಮನಿಸುವೆ. ಯಾರು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅಂಥವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.
ನಿರ್ಮಾಣ 2 ತಾಂತ್ರಿಕ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಾದಚಾರಿ ಅತಿಕ್ರಮಣ ವಿಚಾರವನ್ನು ಪಾಲಿಕೆ ಗಂಭೀರವಾಗಿ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ಬಳಿಕ ನಗರದ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದರು.
ಗೌರವ ಕಾರ್ಯದರ್ಶಿ ಕೆಸಿಸಿಐ ಮಹೇಂದ್ರ ಸಿಂಘಿ ಮಾತನಾಡಿ, ಪಾಲಿಕೆ ಹಾಗೂ ವಲಯ ಕಚೇರಿಯ ಕೆಳ ಹಂತದ ಅಧಿಕಾರಿಗಳಿಗೆ ಆಯುಕ್ತರ ಬಗ್ಗೆ ಭಯವಿಲ್ಲ. ಆದ್ದರಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಆದ್ದರಿಂದ ಆಯುಕ್ತರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಡಿ.ಎಂ. ಶಾನಭಾಗ ಮಾತನಾಡಿ, ಇ -ಸ್ವತ್ತು ಪಡೆಯಲು ವಿಳಂಬವಾಗುತ್ತಿದೆ. ಅಧಿಕಾರಿಗಳು ಅಲೆದಾಡಿಸ್ತುತಾರೆ. ಇದರಿಂದ ಸಾರ್ವಜನಿಕರಿಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ತಕ್ಷಣ ವಾರ್ಡ್ ಸಮಿತಿ ಆರಂಭಿಸಬೇಕು ಎಂದರು.
ಕೆಸಿಸಿಐ ಅಧ್ಯಕ್ಷ ಎಸ್.ಬಿ. ಸಂಶೀಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಸಿಸಿಐ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಮಾಜಿ ಅಧ್ಯಕ್ಷ ವಿನಯ ಜವಳಿ, ಪಾಲಿಕೆ ಕಂದಾಯ ಅಧಿಕಾರಿ ಆನಂದ ಕಲ್ಲೋಳಕರ, ರವೀಂದ್ರ ಗಾಯತೊಂಡೆ,ಉಮೇಶ ಪೂಜಾರಿ, ಗಿರೀಶ ನಲವಡಿ ಇದ್ದರು.