ಜಿಲ್ಲೆ

ಬಿಜೆಪಿ ಸರ್ಕಾರದ ಜನಪರ ಯೋಜನೆ ಮರು ಜಾರಿ‌ ಮಾಡದಿದ್ದರೆ ಹೋರಾಟ, ಮಾಜಿ ಸಚಿವೆ ಜೊಲ್ಲೆ ಎಚ್ಚರಿಕೆ

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2-3 ತಿಂಗಳಲ್ಲಿಯೇ ಈ‌ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತರಿಗೆ ಪೂರಕವಾಗಿದ್ದ 19 ಯೋಜನೆಗಳನ್ನು ತಡೆ ಹಿಡಿದಿದ್ದು ಖಂಡನೀಯ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ತಡೆಹಿಡಿದು ರೈತರಿಗೆ ಅನ್ಯಾಯ ಮಾಡುತ್ತಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಮೂರು ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂ. ಹಣ ನೀಡುತ್ತಿತ್ತು. ಆದರೆ, ರಾಜ್ಯ ಸರ್ಕಾರದಿಂದ ನೀಡಬೇಕಾಗಿದ್ದ ಹಣವನ್ನು ಸ್ಥಗೀತಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ 11 ಲಕ್ಷ ರೈತ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿದ್ದರು. ಅದನ್ನು ಸ್ಥಗೀತ ಮಾಡಿದೆ. ಅವುಗಳನ್ನು ಮರು ಜಾರಿ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಪಿಎಂಸಿ ಕಾನೂನು ರೈತರಿಗೆ ಬೇಕಾದ ಕಡೆಗಳಲ್ಲಿ ತಾವು ಬೆಳೆದ ಬೆಳೆ, ತರಕಾರಿ ಮಾರುವ ಅನುಕೂಲ ಮಾಡಿಕೊಡಲಾಗಿತ್ತು. ಈ ಕಾಯ್ದೆಯನ್ನೂ ರದ್ದು ಮಾಡಿದ್ದು ರೈತರಿಗೆ ಮಾಡಿದ ಅನ್ಯಾಯ ಎಂದರು.
ಶ್ರಮ ಶಕ್ತಿ ಯೋಜನೆ ಚಿಕ್ಕ ಯೋಜನೆಯಾದರೂ ರೈತ ಕುಟುಂಬ ಇರುವ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ 500 ರೂ. ಪ್ರೋತ್ಸಾಹ ಧನ ನೀಡುತ್ತಿದ್ದ ಬಿಜೆಪಿ ಸರ್ಕಾರದ ಯೋಜನೆಯನ್ನು ತಡೆ ಹಿಡಿದಿದೆ. ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಯೋಜನೆ, ಮೀನುಗಾರಿಕೆ, ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಕ್ಲಷ್ಟರ್ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಆ ಎಲ್ಲಾ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಜಿಲ್ಲೆಗೆ ಹಿಂದಿನ ಬಿಜೆಪಿ ಸರ್ಕಾರದ ಅವದಿಯಲ್ಲಿ ಬಹಳಷ್ಟು ಅನುದಾನವನ್ನು ಬೊಮ್ಮಾಯಿ ಅವರು ನೀಡಿದ್ದರು. ಈ ಸರ್ಕಾರ ನೀರಾವರಿ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೊಡುವುದಿಲ್ಲ ಎಂದು ಹೇಳಿದೆ. ಇದು ಉತ್ತರ ಕರ್ನಾಟಕದ ಜನ ವಿರೋಧಿ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾರ ವಿರುದ್ಧವೂ ದೂರು ನೀಡಿಲ್ಲ:
ಅಭಿವೃದ್ಧಿ ವಿಚಾರಕ್ಕಾಗಿ ನಾವು ದೆಹಲಿಗೆ ಹೋಗಿದ್ದೇವು. ಆದರೆ ಯಾರ ವಿರುದ್ಧವೂ ದೂರು ನೀಡಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಬಹಳ ಇವೆ. ಆದರೆ ಗೆಲುವಿಗೆ ಕಾರಣ ಇರುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದರೆ ಚಿಕ್ಕೋಡಿ ಅಥವಾ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಅಲ್ಲದೇ, ಬೇರೆ ಅಭ್ಯರ್ಥಿಗಳನ್ನು ಸ್ಪಂರ್ದಿಸಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಬೆಳಗಾವಿ ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ನೇರಲಿ, ಶಾಸಕರಾದ ಅಭಯ್ ಪಾಟೀಲ, ನಿಖಿಲ್ ಕತ್ತಿ, ಉಜ್ವಲಾ ಬಡವನಾಚೆ ಹಾಗೂ ಬಿಜೆಪಿ ಇತರ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.