ಜಿಲ್ಲೆ

ಗುಡ್ಡದ ತಳ ದುರ್ಬಲವಾದರೆ ಭದ್ರಾ ಡ್ಯಾಂಗೆ ಆಪತ್ತು

ತರೀಕೆರೆ: ಸರ್.ಎಂ.ವಿಶ್ವೇಶ್ವರಯ್ಯ ಅವರ ತಾಂತ್ರಿಕ ಕೌಶಲ್ಯದಿಂದ 1962ರಲ್ಲಿ ನಿರ್ಮಿಸಿದ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ನೀರಾವರಿ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಭವಿಷ್ಯದಲ್ಲಿ ಭಾರಿ ಅಪಾಯದ ಮುನ್ಸೂಚನೆ ನೀಡಿದೆ.
ತರೀಕೆರೆ, ಭದ್ರಾವತಿ, ಚನ್ನಗಿರಿ, ದಾವಣಗೆರೆ ಭಾಗಗಳ ಅನ್ನದಾತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಲ್ಲಿ ಕಾಲಕ್ಕೆ ಕೈಗೊಳ್ಳಬೇಕಾದ ದುರಸ್ತಿ ಕಾರ್ಯವನ್ನು ಮುಂದೂಡುತ್ತಿರುವುದು ಹಾಗೂ ನಾಲ್ಕು ಕ್ರಸ್ಟ್‌ಗೇಟ್‌ಗಳ ಬಲ ಬದಿಯಲ್ಲಿರುವ ಗುಡ್ಡದಡಿ ತರೀಕೆರೆ, ಹೊಸದುರ್ಗ, ಕಡೂರು, ತುಮಕೂರಿಗೆ ಕುಡಿಯುವ ನೀರು ಪೂರೈಸಲು ಕೈಗೊಳ್ಳುತ್ತಿರುವ ಅವೈಜ್ಞಾನಿಕ ಜಲಜೀವನ್ ಮಿಷನ್ ಕಾಮಗಾರಿಯಿಂದ ಜಲಾಶಯದ ಸುರಕ್ಷತೆಗೆ ಧಕ್ಕೆ ತಂದಿದೆ.
ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗಿರುವ 71 ಟಿಎಂಸಿಗೂ ಅಧಿಕ ಪ್ರಮಾಣದ ನೀರನ್ನು ತಡೆದು ನಿಲ್ಲಿಸುವಷ್ಟರ ಮಟ್ಟಿಗೆ ಬಲಿಷ್ಟವಾಗಿರುವ ಗುಡ್ಡದಡಿ ಸರ್ಕಾರ ಇದೀಗ ಜಲಜೀವನ್‌ಮಿಷನ್ ಕಾಮಗಾರಿಗೆ ಡ್ಯಾಂ ಪಕ್ಕದ ಗುಡ್ಡದಡಿ ಮಣ್ಣು ತೋಡುತ್ತಿರುವುದು ಹಾಗೂ ಅಲ್ಲಲ್ಲಿ ನಿರ್ಮಿಸಲಿರುವ ಫಿಲ್ಟರ್ ಬೆಡ್‌ಗಳು, ಗುಡ್ಡದೊಳಗೆ ಅಳವಡಿಸಲು ಚಿಂತಿಸಿರುವ ಬೃಹತ್ ಗಾತ್ರದ ಪೈಪ್‌ಗಳು ಭದ್ರಾ ಜಲಾಶಯದ ಅಡಿಪಾಯವನ್ನೇ ಅಭದ್ರಗೊಳಿಸಲಿದೆ.
ಕಾಮಗಾರಿಗಳೇ ಕಂಟಕ:
ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಗಾಗಿ ಅಪ್ಪಳಿಸಿ ಬರುವ ನೀರನ್ನು ತಡೆಯಲು ಪ್ರಕೃತಿದತ್ತವಾಗಿ ಮೈಯೊಡ್ಡಿದ್ದ ಕದಲಿ ರಂಗನಾಥ ಸ್ವಾಮಿ ದೇಗುಲ ಸಮೀಪದ ಗುಡ್ಡ ಅಗೆದು ನಾಲೆ ನಿರ್ಮಿಸಲಾಗಿದೆ. ಇದರ ಹೊರತಾಗಿಯೂ ಇದೀಗ ಕ್ರಸ್ಟ್‌ಗೇಟ್ ಬಲ ಬದಿಯ ಗುಡ್ಡದಡಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಆರಂಭಿಸಲು ಹೊರಟಿರುವುದು ಜಲಾಶಯಕ್ಕೆ ಆಪತ್ತು ಎದುರಾಗುವ ಮುನ್ಸೂಚನೆಯನ್ನು ಗಟ್ಟಿಗೊಳಿಸಿದೆ.