ಜಿಲ್ಲೆ

ಬಜರಂಗದಳ ತಂಟೆಗೆ ಬಂದರೆ ಕೈ ಪಡೆ ನಾಮಾವಶೇಷ

ಗದಗ: ಬಜರಂಗದಳ ತಂಟೆಗೆ ಬಂದರೆ ಕೈ ಪಡೆ ನಾಮಾವಶೇಷವಾಗಲಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಒಂದೆಡೆ ದೇಶದ್ರೋಹಿ ಪಿಎಫ್‌ಐ ಸಂಘಟನೆ ಬೆಂಬಲಿಸುವುದು, ಮತ್ತೊಂದೆಡೆ ಹಿಂದು ಸಂಘಟನೆಗಳ ಮೇಲೆ ಕಿಡಿ ಕಾರುವುದು, ಬೆಳಗಾದರೆ ಹಿಂದು ಸಂಘಟನೆಗಳನ್ನು ಟಾರ್ಗೆಟ್ ಮಾಡುವುದೇ ಕಾಂಗ್ರೆಸ್ ಪಕ್ಷಕ್ಕೆ ಉದ್ಯೋಗವಾಗಿಬಿಟ್ಟಿದೆ ಎಂದು ಸಚಿವ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳ ತಂಟೆಗೆ ಬರಬೇಡಿ

ಬಜರಂಗದಳ ನಿಷೇಧಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕೆ ಇದೆಯೆ? ದೇಶ ಕಟ್ಟುವ ಹಿಂದು ಸಂಘಟನೆಗಳನ್ನು ವಿರೋಧಿಸಿ, ದೇಶ ವಿಭಜಿಸುವ ಪಿಎಫ್‌ಐ ಸಂಘಟನೆಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ.

ಪಿಎಫ್‌ಐ ಕಾರ್ಯಕರ್ತರು ಆರೋಪಿಗಳಾಗಿದ್ದ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆಯಿತು. ಇದಕ್ಕೆ ಏನು ಸಮರ್ಥನೆ ಇದೆ? ಮಂಗಳೂರಿನ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸೇರಿದಂತೆ ಹಲವು ಹಿಂದು ಕಾರ್ಯಕರ್ತರ ಕೊಲೆ ಪ್ರಕರಣಗಳಿಗೆ ನ್ಯಾಯ ಬೇಡವೆ ಎಂದು ಪ್ರಶ್ನಿಸಿದರು.

೨೦೪೭ರ ಒಳಗಾಗಿ ಭಾರತವನ್ನು ಇಸ್ಲಾಮೀಕರಣ ಮಾಡುವ ಗುರಿ ಹಾಕಿಕೊಂಡು ವಿವಿಧ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿತ್ತು ಪಿಎಫ್‌ಐ. ಇಂಥ ದೇಶದ್ರೋಹಿ ಸಂಘಟನೆಯನ್ನು ನಿಷೇಧಿಸುವ ಮೂಲಕ ಭಾರತದ ಏಕತೆ ಮತ್ತು ಭದ್ರತೆಗೆ ಬಿಜೆಪಿ ಸರ್ಕಾರ ಸದಾ ಸಿದ್ಧ ಎಂದು ತೋರಿಸಿದೆ ಎಂದರು.

ಕಾಂಗ್ರೆಸ್ ಮೊದಲಿನಿಂದಲೂ ಒಡೆದು ಆಳುವ ನೀತಿ ಅನುಸರಿಸುತ್ತ ಬಂದಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಮೂಲಕ ವೀರಶೈವ ಲಿಂಗಾಯತರನ್ನು ಒಡೆದು ಆಳುವ ಹುನ್ನಾರಕ್ಕೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ. ಇದು ರಾಜ್ಯದ ಎಲ್ಲರಿಗೂ ಗೊತ್ತಿರುವ ಸತ್ಯ.

ಸಿದ್ದರಾಮಯ್ಯ ಲಿಂಗಾಯತ ವೀರಶೈವರ ವಿರೋಧಿ. ಒಡೆದು ಆಳುವ ನೀತಿ ಅನುಸರಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಕಳೆದ ಬಾರಿ ತಕ್ಕ ಪಾಠ ಕಲಿಸಿದ್ದರು. ಈ ಬಾರಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸ್ಥಿತಿ ಹಿನಾಯವಾಗಲಿದೆ. ಇದು ಶತಸಿದ್ಧ ಎಂದು ಹೇಳಿದರು.

ದೇಶದ ಭದ್ರತೆಗೆ ಪ್ರಾಮುಖ್ಯತೆ

ಉಗ್ರಗಾಮಿಗಳಿಂದ ಬಾಲಾಕೋಟ್ ದಾಳಿ ನಂತರ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ಮತ್ತು ಉಗ್ರರಿಗೆ ಭಾರತ ತಕ್ಕ ಪಾಠ ಕಲಿಸಿದೆ.
ಆರ್ಥಿಕತೆಯಲ್ಲಿ ಭಾರತ ಮುನ್ನುಗುತ್ತಿದೆ. ಡಿಜಿಟಲ್ ಪೇಮೆಂಟ್‌ನಲ್ಲಿ ವಿಶ್ವದಲ್ಲೇ ಭಾರತ ನಂ.೧ ಸ್ಥಾನ ಗಳಿಸಿದೆ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈಶಾನ್ಯ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಕ್ರಾಂತಿಯನ್ನೇ ಸೃಷ್ಟಿಸಿದೆ.


ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶ್ವವೇ ಪ್ರಶಂಸಿಸುತ್ತಿದೆ. ಜಿ. ೨೦ ಶೃಂಗ ಸಭೆ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜರುಗಿದೆ ಎಂದರೆ ಭಾರತದ ವಿಶ್ವಮಾನ್ಯತೆ ಏನೆಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಸಿ.ಸಿ. ಪಾಟೀಲ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳ ತಾಕತ್ತು ಜನರಿಗೆ ಮನವರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಧಿಸಿ ಅಧಿಕಾರ ಸೂತ್ರ ಹಿಡಿಯಲಿದೆ.- ಸಿ.ಸಿ. ಪಾಟೀಲ ನರಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ