ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಬೆಂಬಲಿತರನ್ನು ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಕಡಿದಾಳ್ ಗೋಪಾಲ್, ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್, ಗೋಪಿ ಮೊದಲಿಯಾರ್, ಸಿದ್ದಪ್ಪ, ತ್ಯಾಗರಾಜ್, ಸಂಜಯ್ ಕಶ್ಯಪ್ ಇತರರಿದ್ದರು. 
ಜಿಲ್ಲೆ

ಮೈತ್ರಿ ಮುಂದುವರಿದರೆ ಶಿವಮೊಗ್ಗ ಕ್ಷೇತ್ರಕ್ಕೆ ಒತ್ತಾಯ

ಶಿವಮೊಗ್ಗ: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಬೇಕು. ಹಾಗಾದಾಗ ಮಾತ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿದರೆ ನಾವು ಶಿವಮೊಗ್ಗ ವಿಧಾನಸಭಾ ಕ್ಷೇತ್ರ ನೀಡುವಂತೆ ಹಕ್ಕೊತ್ತಾಯ ಮಂಡಿಸಬಹುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.

ಇತ್ತೀಚೆಗೆ ನಡೆದ ಸಹಕಾರ ಕ್ಷೇತ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತರನ್ನು ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಮಂಗಳವಾರ ಸನ್ಮಾನಿಸಿ ಮಾತನಾಡಿದ ಅವರು, ನಮ್ಮ ಶಕ್ತಿ ವೃದ್ಧಿಸಿಕೊಳ್ಳಬೇಕು. ಪಾಲಿಕೆಯಲ್ಲಿ ಹೆಚ್ಚು ಸ್ಥಾನ ನಮ್ಮದಾಗಬೇಕು. ಆಗ ಮಾತ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರಕ್ಕಾಗಿ ಒತ್ತಾಯಿಸಬಹುದು ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಲು ಮುಖಂಡರು, ಕಾರ್ಯಕರ್ತರು ಈಗಲೇ ಕೆಲಸ ಆರಂಭಿಸಬೇಕು. ಪ್ರತಿ ಬೂತ್‌ಗಳಿಗೆ ತೆರಳಿ ಜನರನ್ನು ಸಂಘಟಿಸಬೇಕು. ಅಲ್ಲಿ ಸಮಿತಿ ರಚನೆ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಸಹಕಾರ ಚುನಾವಣೆಯಲ್ಲಿ ಗೆದ್ದವರು ಪಕ್ಷಕ್ಕೆ ಹೆಚ್ಚಿನ ಸಮಯ ನೀಡಬೇಕು. ಮಾಜಿ ಪ್ರಧಾನಿ ದೇವೇಗೌಡ ಅವರು ಇಳಿ ವಯಸ್ಸಿನಲ್ಲೂ ಕ್ರಿಯಾಶೀಲರಾಗಿದ್ದಾರೆ. ನಮ್ಮನ್ನೆಲ್ಲ ನಾಚಿಸುವಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಬೇರು ಮಟ್ಟದಿಂದ ಪಕ್ಷ ಸಂಘಟಿಸಲು ಕೆಲಸ ಮಾಡಬೇಕು ಎಂದರು.

ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾಗಿರುವ ಪ್ರಮುಖರಾದ ಎಸ್.ಟಿ.ಕೃಷ್ಣೇಗೌಡ, ಉಮಾಶಂಕರ ಉಪಾಧ್ಯ, ಕೆ.ಎನ್. ರಾಮಕೃಷ್ಣ, ನರಸಿಂಹ ಗಂಧದಮನೆ, ಮಹೇಶ್, ಕಾಂತರಾಜ್, ಮಾಧವಮೂರ್ತಿ, ರಮೇಶ್ ನಾಯ್ಕ, ಅಬ್ದುಲ್ ವಾಜಿದ್, ವೀರೇಶ್ ಸೇರಿ 30ಕ್ಕೂ ಹೆಚ್ಚು ಪ್ರಮುಖರನ್ನು ಸನ್ಮಾನಿಸಲಾಯಿತು.

ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ತ್ಯಾಗರಾಜ್, ಸಿದ್ದಪ್ಪ, ಸಂಗಯ್ಯ, ಬೊಮ್ಮನಕಟ್ಟೆ ಮಂಜುನಾಥ್, ಸಂಜಯ್ ಕಶ್ಯಪ್, ದಯಾನಂದ್, ವಿನಯ್, ಗೋಪಿ ಮೊದಲಿಯಾರ್ ಇತರರಿದ್ದರು.