ಬಂಜಾರ ಧರ್ಮಗುರುಗಳ ಮಹಾಸಭಾ ಎಚ್ಚರಿಕೆ
ಹೊಸಪೇಟೆ: ಮಾಜಿ ಶಾಸಕ ಭಿಮಾನಾಯ್ಕ ಮತ್ತು ಬಂಜಾರ ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿರುವ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಅವರನ್ನು ೪೮ ಗಂಟೆಗಳಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ಎಚ್.ಬಿ.ಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಬಂಜಾರ ಧರ್ಮಗುರುಗಳ ಮಹಾಸಭಾ ಕಾರ್ಯಾಧ್ಯಕ್ಷ ಕುಮಾರ ಮಹಾರಾಜ್ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹಗರಿಬೊಮ್ಮನಹಳ್ಳಿಯಲ್ಲಿ ಮಾಜಿ ಶಾಸಕ ಭೀಮಾನಾಯ್ಕ ಮತ್ತು ಬಂಜಾರ ಮಹಿಳೆಯರ ವಿರುದ್ಧ ಸಿರಾಜ್ ಶೇಖ್ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಈ ಕುರಿತು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಂಜಾರ ಸಮುದಾಯದವರು ಪ್ರಚೋದನೆಗೆ ಒಳಗಾಗದೇ ಸ್ಥಳೀಯ ಎಚ್.ಬಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಾತಿ ನಿಂದನೆ, ಕೊಲೆ ಬೆದರಿಕೆ ಎಫ್‌ಐಆರ್ ದಾಖಲಾದ ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸಬೇಕು. ಆದರೆ, ಪೊಲೀಸರು ಯಾವ ಪ್ರಭಾವಕ್ಕೆ ಒಳಗಾಗಿದ್ದಾರೋ? ಇಲ್ಲಿನ ಪೊಲೀಸರು ಸಂತ್ರಸ್ತರ ಪರ ಅಥವಾ ಆರೋಪಿ ಪರ ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ದೂರು ದಾಖಲಾಗಿ ಮೂರು ದಿನ ಕಳೆದರೂ, ಆರೋಪಿಯನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮಾನಾಯ್ಕ್ ಕಳೆದ ೧೦ ವರ್ಷಗಳ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರ ಪತ್ನಿ ಗೀತಾ ಬಾಯಿ ಮಹಿಳಾ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಂತಹ ಕುಟುಂಬದ ವಿರುದ್ಧ ಅವಾಚ್ಯವಾಗಿ ಮಾತನಾಡಿರುವುದು ಸಹಿಸಲು ಅಸಾಧ್ಯ. ಸಾಮಾಜಿಕ ಪ್ರಜ್ಞೆ ಇಲ್ಲದ ಸಿರಾಜ್ ಶೇಖ್ ಅವರನ್ನು ತಕ್ಷಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾದ ಅಧ್ಯಕ್ಷ ಸೈನಾ ಭಗತ್, ಕೊಪ್ಪಳದ ಗುರುಗೋಸಾಯಿ ಬಾಬಾ, ತರೀಕೆರೆಯ ಮಂಜು ಮಹಾರಾಜ್, ದಾವಣಗೆರೆಯ ಡಾ.ವೆಂಕಟೇಶ್ ಗುರುಜೀ, ಬಂಜಾರ ಸಮಾಜದ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಗಿರೀಶ್ ಸುದ್ದಿ ಗೋಷ್ಠಿಯಲ್ಲಿದ್ದರು.