ಜಿಲ್ಲೆ

ಶರಣ್ ಪಂಪ್‌ವೆಲ್ ಕೇಸಿಗೆ ಬಿ ರಿಪೋರ್ಟ್ ಹಾಕದಿದ್ದರೆ ಹೋರಾಟ

Mangaluru - Shravan Kumar Nala

ಮಂಗಳೂರು: ರಸ್ತೆಯಲ್ಲಿ ನಮಾಜ್ ಮಾಡಿರುವುದನ್ನು ಪ್ರಶ್ನಿಸಿದ ಹಿಂದೂ ಕಾರ್ಯಕರ್ತ ಶರಣ್ ಪಂಪ್‌ವೆಲ್ ಮೇಲೆ ಕೇಸು, ನಮಾಜ್ ಮಾಡಿದವರ ಮೇಲಿನ ಕೇಸಿಗೆ ಬಿ ರಿಪೋರ್ಟ್ ಹಾಕಿದ ಪೊಲೀಸರ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ತಕ್ಷಣದಲ್ಲಿ ಶರಣ್ ಪಂಪ್‌ವೆಲ್ ಕೇಸಿಗೂ ಬಿ ರಿಪೋರ್ಟ್ ಹಾಕದಿದ್ದರೆ ಬಿಜೆಪಿಯಿಂದ ಜಿಲ್ಲೆಯಾಧ್ಯಂತ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ ಅವರು, ಪ್ರಾರ್ಥನಾ ಮಂದಿರದಲ್ಲಿ ಮಾಡುವ ನಮಾಜನ್ನು ಬೀದಿಯಲ್ಲಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಧಕ್ಕೆಯುಂಟುಮಾಡಿದ ಬಗ್ಗೆ ಸುಮೊಟೊ ದೂರು ದಾಖಲಾಗಿ ಒಂದೇ ದಿನದಲ್ಲಿ ‘ಬಿ’ ರಿಪೋರ್ಟ್ ಹಾಕುವುದರ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ. ಯಾವುದೇ ತನಿಖೆ ನಡೆಸದೆ ‘ಬಿ’ ರಿಪೋರ್ಟ್ ಹಾಕಿದ್ದು ಸರಿಯೇ? ಕಾರ್ಯಕರ್ತರ ಪರವಾಗಿ ಮಾತನಾಡಿದ ಬೆಳ್ತಂಗಡಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿ ಎರಡೇ ದಿನದಲ್ಲಿ ಚಾರ್ಜ್‌ಶೀಟ್ ಹಾಕುವುದು ರಾಷ್ಟ್ರದಲ್ಲೇ ಮೊದಲು. ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಹಿಂದೂ ನಾಯಕರ ಶಕ್ತಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಈಬಗ್ಗೆ ಬಿಜೆಪಿ ರಾಜ್ಯಾಧ್ಯಂತ ಹೋರಾಟ ನಡೆಸಲಿದೆ ಎಂದರು.

ಬಿಜೆಪಿ ಮುಂಡರಾದ ಜಗದೀಶ್ ಶೇಣವ, ಪ್ರೇಮಾನಂದ ಶೆಟ್ಟಿ, ನಿತೀನ್ ಕುಮಾರ್ ಮೊದಲಾದವರಿದ್ದರು.