ಜಿಲ್ಲೆ

ಸರ್ಕಾರಕ್ಕೆ ಗಡುವು ಕೊಟ್ಟ ಗುತ್ತಿಗೆದಾರರು: ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯಪಾಲರು, ಕಾಂಗ್ರೆಸ್ ಹೈಕಮಾಂಡ್‌ಗೆ ದೂರು

ಹರೀಶ್​​ ಕೆ.ಸಿ.

ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಇರುವ 32 ಸಾವಿರ ಕೋಟಿ ರೂ. ಬಿಲ್ ಪಾವತಿಗೆ ರಾಜ್ಯ ಸರ್ಕಾರಕ್ಕೆ ಗಡುವು ಕೊಟ್ಟಿರುವ ರಾಜ್ಯ ಗುತ್ತಿಗೆದಾರರ ಸಂಘ, ಡಿಸೆಂಬರ್ ಒಳಗೆ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಕೊಡುವುದಾಗಿ ಘೋಷಿಸಿದೆ.

ಲೋಕೋಪಯೋಗಿ, ಜಲಸಂಪನ್ಮೂಲ, ಕಾರ್ಮಿಕ, ವಸತಿ, ನಗರಾಭಿವೃದ್ಧಿ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿ 8 ಇಲಾಖೆಗಳು ಗುತ್ತಿಗೆದಾರರ ಬಾಕಿ ಹಣವನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡುವುದು ಸೇರಿ ಇತರ ಸಮಸ್ಯೆ ಕುರಿತು ಎರಡೂವರೆ ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ. ಬಳಿಕ, ಐದಾರು ಬಾರಿ ಸಿಎಂ ನಮ್ಮ ಜೊತೆ ಸಭೆ ನಡೆಸಿದ್ದರೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಡಿಸೆಂಬರ್‌ದೊಳಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಂಸದರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್‌ಗೆ ದೂರು ಸಲ್ಲಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಕಿ ಹಣ ಬಿಡುಗಡೆಗಾಗಿ ಸಂಬಂಧಪಟ್ಟ ಇಲಾಖೆಗಳ ಸಚಿವರನ್ನು ಮತ್ತು ಸರ್ಕಾರದ ಕಾರ್ಯದರ್ಶಿಗಳನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಸೇರಿ 8 ಇಲಾಖೆಗಳಲ್ಲಿ ಜ್ಯೇಷ್ಠತೆ ಮತ್ತು ಪಾರದರ್ಶಕತೆ ಕಾಯ್ದೆ ಉಲ್ಲಂಸಿ, ಅವರವರ ಅನುಕೂಲಕ್ಕೆ ತಕ್ಕಂತೆ ಸೂತ್ರ ರೂಪಿಸಿ ಬೇಕಾದವರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಸಿಎಂ ಮೇಲಿನ ಭರವಸೆಯಿಂದ ಎಲ್ಲ ಜಿಲ್ಲೆಗಳ ಗುತ್ತಿಗೆದಾರರು ಇದುವರೆಗೆ ಸಮಾಧಾನದಿಂದ ಇದ್ದೇವೆ. ಸರ್ಕಾರದ ಜೊತೆಗೆ ನಮಗೆ ಸಂಘರ್ಷ ಬೇಕಿಲ್ಲ ಎಂದು ಆರ್.ಮಂಜುನಾಥ್ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಬಿ.ಶೇಗಜಿ, ಉಪಾಧ್ಯಕ್ಷ ಬಿ.ಸಿ.ದಿನೇಶ್, ಕಾರ್ಯಾಧ್ಯಕ್ಷ ಎಂ. ಎಸ್.ಸಂಕಾಗೌಡಶಾನಿ, ಖಜಾಂಚಿ ಡಿ.ಎಂ.ನಾಗರಾಜು, ಜಿಬಿಎ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ಮತ್ತಿತರರಿದ್ದರು.

ಪ್ಯಾಕೇಜ್ ಟೆಂಡರ್ ಭೂತ:

ಕಾರ್ಮಿಕ ಇಲಾಖೆ, ಪೌರಾಡಳಿತ, ನಗರಾಭಿವೃದ್ಧಿ, ನಗರ ಯೋಜನೆ ಇಲಾಖೆ ಸೇರಿ ಇತರ ಇಲಾಖೆಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಉಲ್ಲಂಸಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿ ತಮಗೆ ಬೇಕಾದ ಬಲಾಢ್ಯ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ 784 ಕೋಟಿ ರೂ. ಮೊತ್ತದ ಟೆಂಡರನ್ನು 4 ಪ್ಯಾಕೇಜ್ ಆಗಿ ಮಾಡಲಾಗುತ್ತಿದೆ. ಇಂತಹ ಪ್ಯಾಕೇಜ್ ಟೆಂಡರ್ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರವು ಪ್ಯಾಕೇಜ್ ಟೆಂಡರ್, ಕಮಿಷನ್ ದಂಧೆಗೆ ಬಲಿಯಾಗಿತ್ತು. ಈಗಿನ ಸರ್ಕಾರವೂ ಇದಕ್ಕೆ ಬಲಿಯಾಗಬಾರದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ವಸತಿ ಇಲಾಖೆಯಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದು, ಈ ಅಧಿಕಾರಿ ಕಡುಭ್ರಷ್ಟ. ಲೋಕಾಯುಕ್ತದಲ್ಲಿ ಅವರ ವಿರುದ್ಧ ಸಾಕಷ್ಟು ದೂರುಗಳಿದ್ದು, ಇಂತಹ ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಗುತ್ತಿಗೆದಾರರು ಹೇಳೋದೇನು?

* ಯಾರ‌್ಯಾರು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಡಿಸೆಂಬರ್ ಬಳಿಕ ಬಹಿರಂಗ

* ಸರ್ಕಾರದ ಭ್ರಷ್ಟಾಚಾರ ರಿಪೋರ್ಟ್ ಕಾರ್ಡ್ ಬಿಡುಗಡೆ

* 52 ಸಾವಿರ ಕೋಟಿ ರೂ. ಪೈಕಿ 20 ಸಾವಿರ ಕೋಟಿ ರೂ. ಹಣ ಬಿಡುಗಡೆ

* ಪ್ರಸ್ತುತ 32 ಸಾವಿರ ಕೋಟಿ ರೂ. ಬಿಲ್ ಬಾಕಿ

* ರಾಜ್ಯದಲ್ಲಿ ಹೊರ ರಾಜ್ಯದ ಗುತ್ತಿಗೆದಾರರೇ ತುಂಬಿ ತುಳುಕುತ್ತಿದ್ದಾರೆ

* ಬ್ಯಾಂಕಿನಲ್ಲಿ ಚಿನ್ನಾಭರಣ ಅಡ ಇಟ್ಟು ಕಾಮಗಾರಿ ನಿರ್ವಹಣೆ

* ಹಣ ಬಿಡುಗಡೆ ವಿಳಂಬದಿಂದ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ತೊಂದರೆ

* ಉದ್ಯೋಗಿಗಳಿಗೆ ವೇತನ, ಬೋನಸ್ ನೀಡಲು ಹಣವಿಲ್ಲ

* ಬ್ಯಾಂಕಿನಲ್ಲಿ ಪಡೆದ ಸಾಲಕ್ಕೆ ಏರುತ್ತಿರುವ ಬಡ್ಡಿ

* ಸಂಪ್ರದಾಯದಂತೆ ದೀಪಾವಳಿ ಹಬ್ಬಕ್ಕಾದರೂ ಹಣ ಬಿಡುಗಡೆ ಮಾಡಿ

* ಸಮಸ್ಯೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ

* ಜಿಲ್ಲಾ ಹಂತದಲ್ಲೂ ಹೋರಾಟ ವಿಸ್ತರಣೆ

* ವರ್ಗ-1 ಗುತ್ತಿಗೆದಾರರು ನಮ್ಮ ಜೊತೆ ಇಲ್ಲ

* ವರ್ಗ-2,3,4 ಗುತ್ತಿಗೆದಾರರಿಗೆ ಅನ್ಯಾಯ

ಇಲಾಖೆವಾರು ಬಾಕಿ ಬಿಲ್‌ಗಳ ವಿವರ

ಇಲಾಖೆ                   ಬಾಕಿ ಮೊತ್ತ

ಜಲಸಂಪನ್ಮೂಲ         12 ಸಾವಿರ ಕೋಟಿ

ಲೋಕೋಪಯೋಗಿ       9 ಸಾವಿರ ಕೋಟಿ

ಆರ್‌ಡಿಪಿಆರ್                 3,800 ಕೋಟಿ

ಸಣ್ಣ ನೀರಾವರಿ ಇಲಾಖೆ 3 ಸಾವಿರ ಕೋಟಿ

ನಗರಾಭಿವೃದ್ಧಿ                   2 ಸಾವಿರ ಕೋಟಿ

ವಸತಿ                          1,200 ಕೋಟಿ

ಕಾರ್ಮಿಕ                          800 ಕೋಟಿ

ಇತರ ಇಲಾಖೆ                1,200 ಕೋಟಿ

ಒಟ್ಟು                      33 ಸಾವಿರ ಕೋಟಿ