ಜಿಲ್ಲೆ

ಪ್ರಕೃತಿ ಸಂರಕ್ಷಿಸದಿದ್ದರೆ ಸರ್ವನಾಶ ಖಂಡಿತ

ಕಿರಣ್ ಗೌಡ.ಜಿ

ಮದ್ದೂರು: ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಪ್ರಕೃತಿಗೆ ನಾವು ಏನು ಕೊಟ್ಟಿದ್ದೇವೆ ಎಂದು ನೋಡಿದರೆ ಶೂನ್ಯ. ಮಳೆ - ಮಣ್ಣು- ಮರ ಇವು ಪ್ರಕೃತಿಯ ಮೂಲ ಅಂಶಗಳು. ಇವುಗಳನ್ನು ಸೂಕ್ಷ್ಮವಾಗಿ ನೋಡಿ ಸಂರಕ್ಷಣೆ ಮಾಡದಿದ್ದರೆ ಸರ್ವನಾಶ ಖಂಡಿತ ಎಂದು ವಿಕಸನ ಸಂಸ್ಥೆಯ ಮುಖ್ಯಸ್ಥ ಶ್ರೀ ಮಹೇಶ್ಚಂದ್ರ ಗುರು ಎಚ್ಚರಿಸಿದರು.

ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಮಂಡ್ಯ ನೇತೃತ್ವದಲ್ಲಿ ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಸಾವಯವ ಕೃಷಿಕರಾದ ಶಿವರಾಮೇಗೌಡ ಅವರ ಸಮಗ್ರ ಕೃಷಿಯ ತೋಟದ ನಿಸರ್ಗದ ಮಡಿಲಿನಲ್ಲಿ ಆಯೋಜಿಸಿದ್ದ ತೋಟ ಕಂ ಊಟ ಕೃಷಿ ಬೆಳಕು ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಣ್ಣಿಗೆ ತುಂಬಾ ಶಕ್ತಿ ಇದೆ, ಮನುಷ್ಯರಾದ ನಾವು ಅದನ್ನು ನಾಶ ಮಾಡುವುದಕ್ಕಷ್ಟೇ ಸೀಮಿತವಾಗಿ ಬಿಟ್ಟಿದ್ದೇವೆ. ಈಗ ಸಾವಯವ ರೈತ ಕಂಪನಿಗಳ ಸ್ಥಾಪಿಸುವ ಮೂಲಕ ಇತಿಹಾಸ ಸೃಷ್ಟಿಸುತ್ತಿದ್ದೇವೆ. ಉತ್ಪಾದನೆಯಲ್ಲಿ ಸುಸ್ಥಿರ ಕೃಷಿ ಮೂಲಕ ಹಸಿರು ಉದ್ಯಮವನ್ನು ಉತ್ತೇಜಿಸಿ, ಹಸಿರು ಆರ್ಥಿಕತೆಯನ್ನು ಪೋಷಿಸಬೇಕಿದೆ. ಬಹು ರಾಷ್ಟ್ರೀಯ ಕಂಪನಿಗಳು ಉತ್ಪಾದನೆ ಮತ್ತು ಆದಾಯವನ್ನು ಮಾತ್ರ ಯೋಚಿಸುತ್ತಾರೆ. ಆದರೆ ರೈತ ಕಂಪನಿಗಳು ಪ್ರಕೃತಿಯನ್ನು ಉಳಿಸಿ, ಆರ್ಥಿಕ ಅಭಿವೃದ್ಧಿಯತ್ತ ಗಮನಹರಿಸಿ, ರೈತನ ಉದ್ಧಾರ ಮಾಡುವಂತಹ ಹೆಜ್ಜೆ ಇರಿಸುತ್ತಿದ್ದಾರೆ ಎಂದರು.

ಬೆಲ್ಲದನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹದೇವ ಮಾತನಾಡಿ, ತೋಟ ಕಂ ಊಟ ಕೃಷಿ ಬೆಳಕು ಚಿಂತನ ಕಾರ್ಯಕ್ರಮವು ಪ್ರತಿ ತಿಂಗಳು ಒಂದೊಂದು ಸಾವಯವ ಕೃಷಿಕರ ಜಮೀನಿನಲ್ಲಿ ನಡೆಯಲಿದ್ದು, ಸಭೆಯಲ್ಲಿ ಪ್ರಗತಿಪರ ಕೃಷಿಕರು, ರೈತ ಕಂಪನಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕುಟುಂಬ ಸಮೇತರಾಗಿ ಭಾಗವಹಿಸಲಿದ್ದಾರೆ. ಸರ್ಕಾರದ ರೈತ ಪರವಾದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ 33 ರೈತ ಉತ್ಪಾದಕರ ಕಂಪನಿಗಳಿದ್ದು, ಅವುಗಳ ಶ್ರೆಯೋಭಿವೃದ್ದಿಯ ಮೂಲಕ ಸಮಗ್ರ ಜಿಲ್ಲೆಯ ಅಭಿವೃದ್ದಿ ಮಾಡುವುದೆ ನಮ್ಮ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ರೈತರು ಬೆಳೆದ ಬೆಳೆಗಳನ್ನು ರೈತ ಉತ್ಪಾದನಾ ಕಂಪನಿಗಳು ಖರೀದಿಸುವ ಶಕ್ತಿ ಸಾಮರ್ಥ್ಯ ಬೆಳೆಸಿಕೊಂಡು ಮುನ್ನಡೆಯಬೇಕು. ರಾಸಾಯನಿಕಮುಕ್ತ ಧಾನ್ಯಗಳು, ಸಾವಯವ ಆಹಾರ ಧಾನ್ಯದ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಬೀಜ, ಗೊಬ್ಬರ, ರಾಸಾಯನಿಕಮುಕ್ತ ಆಹಾರ ಪದಾರ್ಥಗಳ ಮಾರಾಟದ ರೈತರ ಮಾರ್ಟ್ ಮಾಡುವ ಆಲೋಚನೆ ಇದೆ. ಇದರಿಂದ ರೈತರು ಲಾಭ ಕಾಣಬಹುದು ಎಂದರು.

ಪ್ರಗತಿಪರ ಸಾವಯವ ರೈತ ಶಿವರಾಮೇಗೌಡ ಹಾಗೂ ಪತ್ನಿ ಸಣ್ಣಮ್ಮ ಅವರನ್ನು ಅಭಿನಂದಿಸಲಾಯಿತು. ಮಂಡ್ಯ ತಾಲೂಕು ಆಲಕೆರೆ ಗ್ರಾಮದ ರೈತ ಶಾಲೆ ಮುಖ್ಯಸ್ಥ ಸತ್ಯಮೂರ್ತಿ, ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ.ಪಿ ಸ್ವಾಮಿ, ರೈತ ಉತ್ಪಾದರ ಒಕ್ಕೂಟದ ರಾಜ್ಯ ನಿರ್ದೇಶಕ ರಾಜೇಶ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಸುಂದರ್ ರಾಜ್ ಹಾಗೂ 15 ರೈತ ಉತ್ಪಾದಕರ ಕಂಪನಿಗಳ ಅಧ್ಯಕ್ಷರು, ಸಿಇಒ, ಪದಾಧಿಕಾರಿಗಳು, ಪ್ರಗತಿಪರ ಸಾವಯವ ಕೃಷಿಕರು ಸೇರಿದಂತೆ 150 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.