ಹುಬ್ಬಳ್ಳಿ: ಕನ್ನಡಕ್ಕೆ ಅನ್ಯಾಯವಾದರೆ, ಅವಮಾನಿಸಿದರೆ ಸರ್ಕಾರಕ್ಕೆ ಪತ್ರ ಚಳವಳಿ ನಡೆಸಬೇಕು. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾದರೆ ಬೀದಿಗಿಳಿದು ಹೋರಾಡಬೇಕು. ಇದರಿಂದ ಮಾತ್ರ ನಮ್ಮ ನಾಡಿಗೆ ಸಕಲ ಸೌಲಭ್ಯ ಸಿಗಲಿದೆ ಎಂದು ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನೈಋತ್ಯ ರೈಲ್ವೆ ಕನ್ನಡ ಸಂಘದಿಂದ ನಗರದ ಗದಗ ರಸ್ತೆಯ ಚಾಲುಕ್ಯ ರೈಲ್ವೆ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಉಳಿಸುವ ಪ್ರಕ್ರಿಯೆ ಪರಿವಾರದಿಂದ ಆರಂಭವಾಗಬೇಕು. ರಾಜ್ಯದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಂತಾಗುತ್ತಿದೆ. ಮನೆ ಮನೆಗಳಲ್ಲಿ ಕನ್ನಡ ಮಾತಾಡಬೇಕು. ಯಾವ ಭಾಷೆ ಕಲಿತರೂ ಕನ್ನಡದಲ್ಲೇ ವ್ಯವಹರಿಸಬೇಕು. ಮಕ್ಕಳಿಗಾಗಿ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ನಿಯತಕಾಲಿಕೆ ತರಿಸಿ ಓದಬೇಕು ಎಂದು ಹೇಳಿದರು.
ನೈಋತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಸತ್ಯಪ್ರಕಾಶ ಶಾಸ್ತ್ರಿ ಮಾತನಾಡಿ, ಕನ್ನಡ ಮಾತನಾಡಲು ಖುಷಿಯಾಗುತ್ತೆ. ಈ ಹಿಂದೆ ರೈಲ್ವೆ ಇಲಾಖೆ ಸೇರುವವರ ಸಂಖ್ಯೆ ವಿರಳವಾಗಿತ್ತು. ರಾಜ್ಯದವರು ಪರೀಕ್ಷೆ ಬರೆಯುತ್ತಿರಲಿಲ್ಲ. ವರ್ಷಕ್ಕೆ ಈಗ 50 ಜನರು ರೈಲ್ವೆ ಇಲಾಖೆಗೆ ಆಯ್ಕೆಯಾಗುತ್ತಿದ್ದಾರೆ. ಕನ್ನಡಿಗರು ಬಹುಸಂಖ್ಯಾತರಾಗಿದ್ದೇವೆ. ಉನ್ನತಾಧಿಕಾರಿಗಳೂ ಇದ್ದಾರೆ. ಸಿಬ್ಬಂದಿ ಸಮಸ್ಯೆ ಅರ್ಧದಷ್ಟು ನಮ್ಮ ಮಾತೃ ಭಾಷೆಯಿಂದಲೇ ಪರಿಹಾರವಾಗುತ್ತಿದೆ ಎಂದರು.
ಸಿ.ಎಂ. ಮುನಿಸ್ವಾಮಿ ಮಾತನಾಡಿದರು. ಇದೇ ವೇಳೆ ‘ನಾಡಹಬ್ಬ ನುಡಿತೋರಣ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಅನೂಪ್ ದಯಾನಂದ ಸಾಧು, ಅನಿತಾ ಶಾಸ್ತ್ರಿ, ಕನ್ನಡ ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ, ಪ್ರಧಾನ ಕಾರ್ಯದರ್ಶಿ ಮಹೇಶ ಎ.ಎಸ್., ಪ್ರಮುಖರಾದ ಅರವಿಂದ ಹೆಗಡೆ, ಸಂತೋಷ ಹೆಗಡೆ, ಡಾ. ರಾಮು ಮೂಲಗಿ, ವೆಂಕಟೇಶ ಮರೆಗುದ್ದಿ, ರವಿಶಂಕರ ಗದಿಗೆಪ್ಪ ಇತರರು ಇದ್ದರು.