ಎನ್.ಆರ್.ಪುರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಡಹಿನಬೈಲು ಗ್ರಾಪಂ ಜೆಡಿಎಸ್ ಕಾರ್ಯಕರ್ತರು ಸೇರ್ಪಡೆಗೊಂಡರು. ಎಂ.ಶ್ರೀನಿವಾಸ್, ಟಿ.ಡಿ.ರಾಜೇಗೌಡ, ಡಾ. ಕೆ.ಪಿ.ಅಂಶುಮಂತ್, ಪಿ.ಆರ್.ಸದಾಶಿವ, ಇಫ್ತಿಕಾರ್‌ಆದಿಲ್, ಇ.ಸಿ.ಜೋಯಿ, ಎಲ್ದೋ, ಕೆ.ಎ.ಅಬೂಬೇಕರ್ ಇತರರಿದ್ದರು. 
ಜಿಲ್ಲೆ

ಜಯಪ್ರಕಾಶ್ ಹೆಗ್ಡೆ ಗೆದ್ದರೆ ಜಿಲ್ಲೆಗೆ ಸುವರ್ಣಯುಗ

ಎನ್.ಆರ್.ಪುರ: ಜಿಲ್ಲೆಯಲ್ಲಿ ಮೂರು ನಿಗಮಗಳ ಅಧ್ಯಕ್ಷರಿದ್ದೇವೆ. ಜಯಪ್ರಕಾಶ್ ಹೆಗ್ಡೆ ಸಂಸದರಾಗಿ ಆಯ್ಕೆಯಾದರೆ ಜಿಲ್ಲೆಯಲ್ಲಿ ಸುವರ್ಣಯುಗ ಪ್ರಾರಂಭವಾಗಲಿದೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ದೊರೆತಿರುವುದೇ ನಮ್ಮ ಭಾಗ್ಯ ಎಂದು ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಶನಿವಾರ ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸರಳ ಹಾಗೂ ಸಜ್ಜನಿಕೆ ರಾಜಕಾರಣಿ. ಶ್ರದ್ಧೆಯಿಂದ ಜನ ಸೇವೆ ಸಲ್ಲಿಸಿರುವ ಅವರಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿದೆ ಎಂದರು.
ತಾಲೂಕು ಕಚೇರಿಯನ್ನು ಪಟ್ಟಣದೊಳಗೆ ಸ್ಥಳಾಂತರಿಸಲು ಸಿಎಂ ಸಿದ್ದರಾಮಯ್ಯ 60 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಚುನಾವಣೆ ನಂತರ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ, ತಾಲೂಕು ಕಚೇರಿ ಸ್ಥಳಾಂತರ ಮಾಡಿಸಲಾಗುವುದು ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬಿಜೆಪಿ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುತ್ತಿದೆ. ಜಾತಿ, ಮತ, ಧರ್ಮ ಎಂಬ ಭೇದ ಸೃಷ್ಟಿಸಿ ಯುವಜನರನ್ನು ತಪ್ಪು ಹಾದಿಗೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನೂ ಕೇವಲ 10 ತಿಂಗಳೊಳಗೆ ಈಡೇರಿಸಿದೆ. ಹಿಂದುತ್ವ ಆಧಾರದ ಮೇಲೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸುಳ್ಳುಗಳೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ರೈತರನ್ನು, ಬಡವರನ್ನು ಹಗಲು ದರೋಡೆ ಮಾಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯಗಳನ್ನು ನೀಡುವ ಭರವಸೆ ನೀಡಲಾಗಿದೆ. ಒತ್ತುವರಿ ಜಾಗಕ್ಕೆ ಹಕ್ಕುಪತ್ರ ವಿತರಿಸಲು ಶೀಘ್ರದಲ್ಲೇ ಕ್ರಮಕೈಗೊಳ್ಳುತ್ತೇವೆ. ಕೃಷಿ ಜಮೀನು, ಗೋಮಾಳ, ಗ್ರಾಮಠಾಣಾ ಜಾಗಗಳನ್ನು ಡೀಮ್ಡ್ ಾರೆಸ್ಟ್ ನೋಟಿಫಿಕೇಷನ್‌ನಿಂದ ಕೈಬಿಡಲು ಶೇ.90 ಕೆಲಸವಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಭಾರತಕ್ಕೆ ಆಮದಾಗುವ ಅಡಕೆ ಜತೆಗೆ ಕಳ್ಳಸಾಗಣೆ ಮೂಲಕ ಬರುತ್ತಿದ್ದ ಅಡಕೆಗೆ ಕಡಿವಾಣ ಹಾಕಲಾಗಿತ್ತು. ಹಳದಿ ಎಲೆ ರೋಗ ಬಂದಾಗ ಕೇಂದ್ರ ಕೃಷಿ ಸಚಿವರೂ ಆದ ಸಂಸದೆ ಶೋಭಾ ಕರಂದ್ಲಾಜೆ ಏಕೆ ಚಕಾರ ಎತ್ತಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಈ ಬಾರಿಯ ಚುನಾವಣೆ ರೈತರು, ಅಡಕೆ ಬೆಳೆಗಾರರು, ಬಡವರು ಬದುಕು ಕಟ್ಟಿಕೊಳ್ಳುವ ಚುನಾವಣೆಯಾಗಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕ ಜಯಪ್ರಕಾಶ್ ಹೆಗ್ಡೆ ಎಂದರು.
ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಹತ್ತಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಕೆಪಿಸಿಸಿ ಸದಸ್ಯರಾದ ಪಿ.ಆರ್.ಸದಾಶಿವ, ಇಫ್ತಿಕಾರ್‌ಆದಿಲ್, ಮುಖಂಡರಾದ ಬಿ.ವಿ.ಉಪೇಂದ್ರ, ಕುಕ್ಕುಡಿಗೆ ರವಿ, ಶ್ರೀನಿವಾಸ, ಎಲ್ದೋ, ಇ.ಸಿ.ಜೋಯಿ, ಪ್ರಶಾಂತ್ ಎಲ್. ಶೆಟ್ಟಿ, ಜುಬೇದಾ, ಸುನೀಲ್‌ಕುಮಾರ್, ಶಿವಣ್ಣ, ಎಂ.ಮಹೇಶ್, ಎಂ.ಆರ್.ರವಿಶಂಕರ್, ಮಾಳೂರುದಿಣ್ಣೆ ರಮೇಶ್ ಇತರರಿದ್ದರು.