ಹುಬ್ಬಳ್ಳಿ : ಜೈನ ಅಭಿವೃದ್ಧಿ ನಿಗಮ ಮಂಡಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರ ಸ್ಪಂದಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವರೂರು ನವಗ್ರಹ ಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ನಿರ್ಲಕ್ಷ್ಯ ಮುಂದುವರಿದರೆ ವಿಧಾನಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸೋಮವಾರ ತಾಲೂಕಿನ ವರೂರು ನವಗ್ರಹ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಜೈನ ಸಮಾಜವನ್ನು ನಿರ್ಲಕ್ಷಿಸುತ್ತಿದೆ ಎಂದು ದುಃಖಿಸಿ, ಕಣ್ಣೀರು ಹಾಕಿದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸುವ ಉದ್ದೇಶದಿಂದ ಮಾ. 19ರಂದು ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ. ಸರ್ಕಾರ ನಮ್ಮ ಸಮಾಜವನ್ನು ಹೀಗೆಯೇ ಅವಗಣಿಸಿದರೆ ಪ್ರತಿಭಟನಾರ್ಥವಾಗಿ ಅನ್ನ ನೀರು ತ್ಯಜಿಸುವ (ಸಲ್ಲೇಖನ) ವ್ರತ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ವಿವಿಧ ಗ್ರಾಮ ಹಾಗೂ ನಗರಗಳ ಜೈನ ಸಮಾಜ ಬಾಂಧವರು 19ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಶಂಕರಪುರಂನಲ್ಲಿರುವ ಕರ್ನಾಟಕ ಜೈನ್ ಅಸೋಸಿಯೇಷನ್ನಿಂದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿಯಾಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊನೆಯ ಮನವಿ ನೀಡಲಾಗುವುದು ಎಂದು ತಿಳಿಸಿದರು.
ನಿಗಮ-ಮಂಡಳಿ ರಚನೆಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಅಥಣಿ ತಾಲೂಕಿನ ಐನಾಪುರದಲ್ಲಿ ಜೂನ್ 8ರಂದು ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ವಿಧಾನಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಅಧಿವೇಶನದ ಸಂದರ್ಭದಲ್ಲಿ ಜೈನ ಸಮಾಜದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡಿದ್ದ ಸತ್ಯಾಗ್ರಹ ಸಂದರ್ಭದಲ್ಲಿ ಮನವಿ ಮಾಡಿದ್ದ 7 ಬೇಡಿಕೆಗಳ ಪೈಕಿ ಸರ್ಕಾರ ಮೂರು ಬೇಡಿಕೆಗಳನ್ನು ಈಡೇರಿಸಿದೆ. ಇನ್ನುಳಿದ ಬೇಡಿಕೆಗಳನ್ನು ಈಡೇರಿಸಿಲ್ಲ. ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ವಿವಿಧ ಶಾಸಕರು, ಸಚಿವರು, ಜೈನ ಅಭಿವೃದ್ಧಿ ನಿಗಮ ಮಂಡಳಿ ರಚಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭರವಸೆ ಈಡೇರಿಲ್ಲ ಎಂದರು.
ಬೆಳಗಾವಿಯಲ್ಲಿ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ವಿುಸಲು ಸರ್ಕಾರ ಅನುಮೋದನೆ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ಈ ರೀತಿಯ ಹಾಸ್ಟೆಲ್ಅನ್ನು ಪ್ರತಿ ಜಿಲ್ಲೆಯಲ್ಲೂ ನಿರ್ವಿುಸಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತ ಇಲಾಖೆಯಲ್ಲಿ ಜೈನ ಸಮಾಜದ ಮನೋಜ ಜೈನ್ ಎಂಬ ಸೆಕ್ರೆಟರಿ ಇದ್ದರು. ಈಗ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಈ ಇಲಾಖೆಯಲ್ಲಿ ನಮ್ಮ ಸಮಾಜವನ್ನು ಪ್ರತಿನಿಧಿಸುವ ಯಾವೊಬ್ಬ ಸದಸ್ಯನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏ. 10ರಂದು ನಡೆಯಲಿರುವ ಮಹಾವೀರ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಜೈನ ಸಮಾಜದ ನಿಗಮ-ಮಂಡಳಿ ರಚನೆಗೆ ಆಗ್ರಹಿಸಿ ಫಲಕವನ್ನು ಸಮಾಜದ ಜನರು ಪ್ರದರ್ಶಿಸಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಸಮಾಜದವರು ಪತ್ರ ಬರೆದು, ನಿಗಮ-ಮಂಡಳಿ ರಚನೆಗೆ ಒತ್ತಾಯಿಸಬೇಕು ಎಂದು ಕರೆ ನೀಡಿದರು.
ತಾವು ಖುದ್ದಾಗಿ ಪ್ರತಿ ಹಳ್ಳಿಗೆ ಭೇಟಿ ನೀಡಿ, ಪ್ರತ್ಯೇಕ ನಿಗಮ-ಮಂಡಳಿ ರಚನೆಯ ಮಹತ್ವದ ಬಗ್ಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಸಂಘಟನೆಯನ್ನು ಬಲಗೊಳಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಅವರಿಗೆ ಎಷ್ಟು ಬಾರಿ ಮನವಿ ಮಾಡಿಕೊಳ್ಳಬೇಕು? ಬಡ ಸಮಾಜ ಏನಾದರೂ ಬೇಡುತ್ತದೆ ಎಂದರೆ ಸ್ಪಂದಿಸಬೇಕು. ಈ ರೀತಿ ನಿರ್ದಯಿ ಮುಖ್ಯಮಂತ್ರಿ ಇರಬಾರದು ಎಂದರು.