ಜಿಲ್ಲೆ

ಮಳೆ ಬಾರದಿದ್ದರೆ ಪರಿಸ್ಥಿತಿ ಗಂಭೀರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಬಿಸಿಲಿನ ಬೇಗೆಯಿಂದ ಬಸವಳಿದು ಸದ್ಯಕ್ಕೊಂದು ಮಳೆಯ ನಿರೀಕ್ಷೆಯಲ್ಲಿರುವ ಜಿಲ್ಲೆಯ ಜನತೆಗೆ ಗ್ರಾಮೀಣ್ ಕೃಷಿ ಮೌಸುಮ್ ಸೇವಾ ಕೇಂದ್ರ ಎಎಮ್‌ಎಫ್‌ಯು ಕಹಿ ಸುದ್ದಿ ಕೊಟ್ಟಿದೆ. ಮಡಿಕೇರಿ ಸೇರಿದಂತೆ ಅಲ್ಲಲ್ಲಿ ಕೆಲವಡೆ ಮೋಡ ಕಟ್ಟುತ್ತಿರುವಂತೆ ಕಂಡುಬಂದರೂ ಸದ್ಯಕ್ಕಂತೂ ಮಳೆಯ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಿದೆ ಸೇವಾ ಕೇಂದ್ರದ ಮಂಗಳವಾರದ ವರದಿ. ಮತ್ತೊಂದು ಕಡೆ ಇನ್ನೊಂದು ವಾರದಲ್ಲಿ ಕೊಡಗಿನಲ್ಲಿ ಮಳೆ ಆಗದಿದ್ದರೆ ಪರಿಸ್ಥಿತಿ ಹದಗೆಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿರುವುದ ಆತಂಕಕ್ಕೆ ಕಾರಣವಾಗಿದೆ.

ಉತ್ತರ ಭಾರತದಲ್ಲಿ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಶಾಲೆ, ಕಾಲೇಜು ಬಂದ್ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೆಲವೆಡೆ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಹೈ ಅಲರ್ಟ್ ಕೂಡ ಕೆಲವು ಕಡೆ ಘೋಷಣೆ ಮಾಡಲಾಗಿದೆ. ಹಾಗಾಗಿ ರಾಜ್ಯದಲ್ಲೂ ಮಳೆ ಬೀಳುವ ನಿರೀಕ್ಷೆ ಹೊಂದಲಾಗಿತ್ತು. ಮಾರ್ಚ್ ಮೊದಲ ಮತ್ತು ಎರಡನೇ ವಾರದಲ್ಲಿ ರಾಜ್ಯದ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಕರಾವಳಿಯ ಭಾಗದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆಯೆ ಈ ಹಿಂದಿನ ವರದಿ ಆಧರಿಸಿ ನಿರೀಕ್ಷಿಸಲಾಗಿತ್ತು.

ಕರ್ನಾಟಕದಲ್ಲಿ ಮುಂದಿನ ಕೆಲ ದಿನದಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಗುಡುಗು, ಮಿಂಚು ಸಹಿತ ಮಳೆ ಸುರಿಯಬಹುದು ಎನ್ನುವ ಮುನ್ಸೂಚನೆಯೂ ಇತ್ತು. ಕಳೆದ ವರ್ಷ ಮಳೆಯ ಪ್ರಮಾಣ ಕುಸಿತಕ್ಕೆ ಕಾರಣವಾಗಿದ್ದ ಎಲ್‌ನಿನೋ ಪರಿಣಾಮ ಈ ವರ್ಷ ದುರ್ಬಲವಾಗುವ ಸೂಚನೆ ಸಿಕ್ಕಿರುವುದು ಕೂಡ ಮಳೆ ಹೆಚ್ಚು ಬರಬಹುದು ಎಂದು ಅಂದಾಜಿಸಲಾದ ಕಾರಣಗಳಲ್ಲಿ ಒಂದಾಗಿತ್ತು. ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ವರುಣನ ದರ್ಶನ ಆಗಲಿದೆ ಎನ್ನುವ ಮಾಹಿತಿ ಇತ್ತು.

ಆದರೆ ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಆಧರಿಸಿ ನಾಗೇನಹಳ್ಳಿಯ ಗ್ರಾಮೀಣ್ ಕೃಷಿ ಮೌಸುಮ್ ಸೇವಾ ಕೇಂದ್ರ, ಎಎಮ್‌ಎಫ್‌ಯು ಮಂಗಳವಾರ (ಮಾ.೫) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮೋಡ ಕವಿದ ಆಕಾಶ ಮಾತ್ರ ಕಂಡು ಬರಲಿದೆ. ಸದ್ಯಕ್ಕೆ ಮಳೆಯ ಲಕ್ಷಣಗಳು ಇಲ್ಲ. ಗರಿಷ್ಠ ೩೪ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ೧೫ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

ಸೂರ್ಯನ ಪ್ರಕರಣ ತಾಪಕ್ಕೆ ಭೂಮಿ ಕಾದ ಕಾವಲಿಯಂತೆ ಆಗಿದ್ದು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ತತ್ತರಿಸಿಹೋಗಿವೆ. ಕೃಷಿಯೂ ಒಣಗಿ ಹೋಗುವ ಹಂತದಲ್ಲಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ಈಗಾಗಲೇ ನೀರಿನ ಮಟ್ಟ ಕುಸಿದಿದ್ದು, ಬಿಸಿಲು ಇದೇ ರೀತಿ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ನೀರು ಬತ್ತುವ ಸಾಧ್ಯತೆ ಇದೆ. ಜಿಲ್ಲೆಯ ಮತ್ತೊಂದು ಜಲಾಶಯವಾದ ಚಿಕ್ಲಿಹೊಳೆ ಡಿಸೆಂಬರ್‌ನಲ್ಲೇ ಖಾಲಿಯಾಗಿದೆ. ಈಗ ಎಲ್ಲರಿಗೂ ಒಂದು ಮಳೆಯ ಅಗತ್ಯವಿದೆ. ಹಾಗಾಗಿ ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕದ ಭವಿಷ್ಯವಾಣಿ ಬಗ್ಗೆ ಜನತೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ.

ಕಾಫಿ ಗಿಡಗಳನ್ನು ಕಾಪಾಡಿಕೊಳ್ಳಲು ಮತ್ತು ಮುಂದಿನ ವರ್ಷಕ್ಕೆ ಫಸಲಿನ ಖಾತರಿ ಮಾಡಿಕೊಳ್ಳಲು ಈಗ ಮಳೆಯ ಅಗತ್ಯವಿದೆ. ಅನುಕೂಲ ಉಳ್ಳವರು, ದೊಡ್ಡ ದೊಡ್ಡ ತೋಟಗಳ ಮಾಲೀಕರು ತೋಟದ ಬದಿ ಹರಿಯುವ ನದಿ, ಕೆರೆ, ಕೊಳವೆ ಬಾವಿಗಳಿಂದ ಕೃತಕ ನೀರಾವರಿ ವ್ಯವಸ್ಥೆ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಆದರೆ ಚಿಕ್ಕ ಚಿಕ್ಕ ತೋಟಗಳ ಮಾಲೀಕರು ಮಳೆಯನ್ನೇ ಅವಲಂಭಿಸಿದ್ದಾರೆ. ಈ ಸಮಯದಲ್ಲಿ ಮಳೆ ಆದರೆ ಅವರ ತೋಟ ಉಳಿಯುತ್ತದೆ. ಮುಂದಿನ ವರ್ಷಕ್ಕೆ ಕಾಫಿಯ ಉತ್ತಮ ಫಸಲು ಕೂಡ ಸಿಗುತ್ತದೆ. ಹಾಗಾಗಿಯೇ ಜಿಲ್ಲೆಯಲ್ಲಿ ಬಹುಪಾಲು ಇರುವ ಸಣ್ಣ ಬೆಳೆಗಾರರು ಮಳೆರಾಯನ ಕರುಣೆಗಾಗಿ ಕಾಯುತ್ತಿದ್ದಾರೆ.

ಕಳೆದ ವರ್ಷ ಬೇಸಿಗೆ ಮಳೆ ಮಾತ್ರವಲ್ಲದೆ ಮುಂಗಾರು ಕೂಡ ಜಿಲ್ಲೆಯಲ್ಲಿ ಕೈ ಕೊಟ್ಟಿತ್ತು. ವಾರ್ಷಿಕವಾಗಿ ವಾಡಿಕೆಯ ೨,೭೨೭.೬ ಮಿಮೀ ಮಳೆಯಾಗಬೇಕಿದ್ದಲ್ಲಿ ೧,೬೮೯.೯ ಮಿಮೀ ಮಾತ್ರ ಮಳೆಯಾಗುವುದರ ಮೂಲಕ ಶೇ. ೩೮ರಷ್ಟು ಮಳೆ ಕೊರತೆ ಆಗಿತ್ತು. ಜನವರಿಯಲ್ಲಿ ೩ ಮಿಮೀ ಮಳೆಯಾಗಬೇಕಿದ್ದಲ್ಲಿ ೧೬ ಮಿಮೀ ಮಳೆಯಾಗಿ ಶೇ. ೧೦೦ರಷ್ಟು ಪ್ರಮಾಣದಲ್ಲಿ ಹೆಚ್ಚಿನ ಮಳೆ ಆಗಿದ್ದರೆ, ಫೆಬ್ರವರಿಯಲ್ಲಿ ೫ ಮಿಮೀ ವಾಡಿಕೆಯ ಮಳೆಯಾಗಬೇಕಿದ್ದಲ್ಲಿ ಮಳೆಯೇ ಬಾರದೇ ಶೇ. ೧೦೦ರಷ್ಟು ಮಳೆಯ ಕೊರತೆ ಆಗಿತ್ತು. ಮಾರ್ಚ್‌ನಲ್ಲಿ ೨೧.೫ ಮಿಮೀ ವಾಡಿಕೆಯ ಮಳೆಯಾಗಬೇಕಿದ್ದಲ್ಲಿ ಕೇವಲ ೨ ಮಿಮೀ ಮಳೆ ಆಗುವ ಮೂಲಕ ಶೇ. ೯೦.೭ರಷ್ಟು ಮಳೆ ಕೊರತೆ ಆಗಿತ್ತು. ಏಪ್ರಿಲ್‌ನಲ್ಲಿ ವಾಡಿಕೆಯ ೮೪ ಮಿಮೀ ಮಳೆಯಾಗಬೇಕಿದ್ದಲ್ಲಿ ೨೭ ಮಿಮೀ ಮಾತ್ರ ಮಳೆಯಾಗಿ ಶೇ. ೬೭.೯ ಮಿಮೀ ಕಡಿಮೆ ಮಳೆ ಬಂದಿತ್ತು. ಮೇನಲ್ಲಿ ೧೩೮.೭ ಮಿಮೀ ಮಳೆಯಾಗಬೇಕಿದ್ದಲ್ಲಿ ೧೨೧.೪ ಮಿಮೀ ಮಳೆಬಂದಿದ್ದರೂ ಶೇ. ೧೨.೫ರಷ್ಟು ಕೊರತೆ ಕಂಡುಬಂದಿತ್ತು.

ಬೇಸಿಗೆಯ ಮಳೆ ಕೊರತೆ ಎಲ್‌ನಿನೋ ಪರಿಣಾಮದಿಂದ ಮುಂಗಾರು ಅವಧಿಯಲ್ಲೂ ಮುಂದುವರಿದಿದ್ದು ಅದರ ದುಷ್ಪರಿಣಾಮ ಈಗ ಎದುರಿಸುವಂತಾಗಿದೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲ. ಕೊಳವೆ ಬಾವಿಗಳಲ್ಲಿ ನೀರು ತಳಸೇರಿದೆ. ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡುಬರುತ್ತಿದೆ. ಮಡಿಕೇರಿಯಲ್ಲಿ ಸದ್ಯದ ಮಟ್ಟಿಗೆ ಯಾವುದೇ ಸಮಸ್ಯೆ ಇಲ್ಲ. ಕಾವೇರಿ ನದಿ ಮಟ್ಟ ಕುಸಿದಿರುವುದರಿಂದ ಕುಶಾಲನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾದ ಸ್ಥಿತಿ ಇದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಬುಧವಾರದಿಂದ (ಮಾ.೬) ಭಾನುವಾರ (ಮಾ.೧೦) ತನಕ ಕೊಡಗಿನಲ್ಲಿ ಮೋಡಕವಿದ ಆಕಾಶ ಇದ್ದರೂ ಮಳೆಯ ಸಾಧ್ಯತೆ ಇಲ್ಲ. ಹಗಲಿನಲ್ಲಿ ತಾಪಮಾನ ಗರಿಷ್ಠ ೩೪ ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ರಾತ್ರಿ ವೇಳೆ ೧೫ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬಹುದು. ಕೊಯ್ಲು ಮಾಡಿದ ಕಾಫಿಯನ್ನು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿನ ಕಾಫಿಯನ್ನು ಚೆನ್ನಾಗಿ ಗಾಳಿಯಾಡುವ ಒಣಗಿದ ಪ್ರದೇಶದಲ್ಲಿ ಸಂಗ್ರಹಿಸಿ ಇಡಬೇಕು. ಗಿಡದ ಬುಡದಲ್ಲಿ ಬಿದ್ದಿರುವ ಕಾಫಿ ಬೀಜವನ್ನು ಸಂಗ್ರಹಿಸಬೇಕು. ಇದರಿಂದ ಕಾಯಿಕೊರಕ ರೋಗದ ಹಾವಳಿ ತಡೆಯಬಹುದು.
ಡಾ. ಸುಮಂತ್‌ಕುಮಾರ್ ಬಿ.ವಿ., ಸಹಸಂಶೋಧಕ, ಗ್ರಾಮೀಣ್ ಕೃಷಿ ಮೌಸುಮ್ ಸೇವಾ ಎಎಮ್‌ಎಫ್‌ಯು, ನಾಗೇನಹಳ್ಳಿ