ಜಿಲ್ಲೆ

ಉನ್ನತ ವ್ಯಾಸಂಗ ಮಾಡಿದ್ದರೆ ಉನ್ನತ ಅಧಿಕಾರಿಯಾಗುತ್ತಿದ್ದೆ:ನಟ ಶ್ರೀನಾಥ್​ ಹೇಳಿಕೆ

ಬೆಂಗಳೂರು:ಶಾಲೆಯಲ್ಲಿ ನಾನು ಶೇ.90 ಗೈರು ಹಾಜರಿಯಾಗಿದ್ದೆ. ಒಂದು ವೇಳೆ ಉನ್ನತ ಶಿಕ್ಷಣ ಪಡೆದಿದ್ದರೆ ಉನ್ನತ ಅಧಿಕಾರಿಯಾಗಬಹುದಿತ್ತು ಎಂದು ನಟ ಶ್ರೀನಾಥ್​ ಹೇಳಿದ್ದಾರೆ.

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ಶುಕ್ರವಾರ ಟೌನ್​ಹಾಲ್​ನಲ್ಲಿ ಆಯೋಜಿಸಿದ್ದ "111ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಬದುಕು ಆದರ್ಶವಾಗಿರಬೇಕು. ಪರಸ್ಪರ ವಿಶ್ವಾಸ ಪ್ರೀತಿ ಬೆಳಸಿಕೊಳ್ಳಬೇಕು. ಯುವ ಸಮುದಾಯ ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತ ಇಟ್ಟುಕೊಂಡು ಗುರಿ ಮುಟ್ಟಲು ಮುನ್ನುಗಬೇಕು. ಪಾಲಕರ ಆಸೆಯನ್ನು ಈಡೇರಿಸುವ ಕೆಲಸವನ್ನು ಮಕ್ಕಳು ಮಾಡಬೇಕು ಎಂದರು.

ನಟಿ ವಿನಯ ಪ್ರಸಾದ್​ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಎಲ್ಲದಕ್ಕೂ ಪ್ರಚಾರ ಸಿಗುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಕೀರ್ತಿ ತನ್ನಿಂದಾನೇ ಹುಡುಕಿಕೊಂಡು ಬರುತ್ತದೆ. ಯುವಕ, ಯುವತಿಯರಿಗೆ ಶಿಕ್ಷಣ ಜತೆಗೆ ವಿನಯತೆ ಬೆಳಸಿಕೊಳ್ಳಬೇಕು. ಸೌಹರ್ದತೆಯಿಂದ ಎಲ್ಲರು ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅಧಿಕ ಅಂಕ ಗಳಿಸಿದ 172 ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಲಾವಿದೆ ಭಾಗ್ಯಶ್ರೀ ಗೌಡ ತಂಡದಿಂದ ಸಂಗೀತ ಸಂಜೆ, ಮಿಮಿಕ್ರಿ ಗೋಪಿರವರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.ಬಿಬಿಎಂಪಿ ವಿಶೇಷ ಆಯುಕ್ತ ಅವಿನಾಶ್​ ಮೆನನ್​ ರಾಜೇಂದ್ರನ್​, ವಲಯ ಆಯುಕ್ತೆ ಆರ್​.ಸ್ನೇಹಲ್​,ಸಂದ ಉಪಾಧ್ಯಕ್ಷ ಕೆ.ಜಿ.ರವಿ, ಗೌರವ ಸಲಹೆಗಾರರಾದ ಸಾಯಿಶಂಕರ್​, ಎ.ಜೆ.ಬಾಬಣ್ಣ, ಸಮಿತಿ ಸದಸ್ಯರರಾದ ಗಂಗಾಧರ್​ (ಲಾಲಿ), ಕೆ.ಎನ್​. ವಿನಯ್​ಕುಮಾರ್​ ಮತ್ತಿತರರಿದ್ದರು.

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ,ನೌಕರರ ಮಕ್ಕಳು ಐಎಎಸ್​, ಇಂಜಿನಿಯರ್​, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಈ ಸಾಧನೆಗೆ ಬಿಬಿಎಂಪಿ ಕಾರಣ. ನಮ್ಮ ಸಂಘಕ್ಕೆ 111 ವರ್ಷ ತುಂಬಿದ್ದು, ಇದರ ಯಶಸ್ವಿಗೆ ಹಲವು ಮಹನೀಯರ ಶ್ರಮವಿದೆ. ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡುವಂತಾಗಬೇಕು.

| ಎ.ಅಮೃತ್​ರಾಜ್​, ಸಂಘದ ಆಡಳಿತ ಮಂಡಳಿ ಅಧ್ಯಕ್ಷ.