ಜಿಲ್ಲೆ

ಹೆಣ್ಣು ಶಿಕ್ಷಿತಳಾದರೆ ದೇಶ ಪ್ರಗತಿ

ಮೈಸೂರು: ಎಲ್ಲ ಹೆಣ್ಣು ಮಕ್ಕಳು ಶಿಕ್ಷಿತರಾದಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಹುಣಸೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮಾ ಅಭಿಪ್ರಾಯಪಟ್ಟರು.

ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ನಟರಾಜ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸ್ನೇಹ ಸಿಂಚನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶವಿದು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯುತ್ತಿದೆ. ನಮ್ಮ ಹೆಣ್ಣು ಮಕ್ಕಳು ಕೂಡ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರದ ಅಭಿವೃದ್ಧಿಗೂ ಕೈ ಜೋಡಿಸಿದ್ದಾರೆ ಎಂದರು.

ಶ್ರೀ ಚಿದಾನಂದ ಸ್ವಾಮೀಜಿ ಅವರು ಹೆಣ್ಣು ಮಕ್ಕಳಿಗಾಗಿ ಕಾಲೇಜನ್ನು ತೆರೆದಿದ್ದು, ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಶಿಕ್ಷಣವಿಲ್ಲದಿದ್ದರೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವಿರುವುದಿಲ್ಲ, ನೀವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಒಳ್ಳೆಯ ಸ್ಥಾನಮಾನಗಳನ್ನು ಪಡೆಬೇಕು ಎಂದು ಸಲಹೆ ನೀಡಿದರು.

ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸಾಧನೆ ಅಷ್ಟು ಸುಲಭವಲ್ಲ, ಮನಸ್ಸಿನಲ್ಲಿ ಗುರಿ ಇಟ್ಟು ಮುನ್ನಡೆದಾಗ ಮಾತ್ರ ಸಾಧಿಸಲು ಸಾಧ್ಯ. ವಿದ್ಯಾರ್ಜನೆ ಮಾಡುವಾಗ ಬೇರೆಯ ಕಡೆ ನಿಮ್ಮ ಗಮನ ಹೋಗಬಾರದು. ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಸರಳತೆ ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ವಿದ್ವಾಂಸರು, ಜ್ಞಾನಿಗಳು ಜಗತ್ತಿನಾದ್ಯಂತ ಪೂಜಿಸಲ್ಪಡುತ್ತಾರೆ. ಪ್ರತಿಭೆಗೆ ಯಾವುದೇ ಜಾತಿ, ವರ್ಣ ಮತಗಳಿಲ್ಲ ಎಂದರು.

ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಶ್ರೀ ಚಿದಾನಂದ ಸ್ವಾಮೀಜಿ, ಪ್ರಾಂಶುಪಾಲರಾದ ವಿ.ಡಿ.ಸುನೀತಾ ರಾಣಿ, ಉಪನ್ಯಾಸಕರಾದ ವಿಮಲಾ ಜ್ಯೋತಿ, ಬಿ.ರಾಧಾ ಇದ್ದರು.