ಜಿಲ್ಲೆ

ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತಾರಂತೆ!

chandru

ಬೆಂಗಳೂರು: ಕರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುವುದು ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಆಗಲಿದ್ದು, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನಗರದಲ್ಲಿ ಪ್ರಸ್ತುತ 24 ರಿಂದ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 40 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು. ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಸಾರ್ವಜನಿಕರು ಪರೀಕ್ಷೆಗೆ ಒಳಪಡದೇ ತಮಗೆ ಸೋಂಕಿಲ್ಲ ಎಂದು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ ಎಂದು ಕಾನೂನು ಕ್ರಮ ಜರುಗಿಸಲಾಗುವುದು. ಮುಂದಿನ ದಿನಗಳಲ್ಲಿ ಕಡ್ಡಾಯ ಕೋವಿಡ್ ಪರೀಕ್ಷೆಗೊಳಪಡುವಂತೆ ಆದೇಶ ಹೊರಡಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ಹೇಳಿದರು.

ಕಾರ್ಖಾನೆ, ಗಾರ್ಮೆಂಟ್ಸ್‌ಗಳಲ್ಲಿ ಪರೀಕ್ಷೆ: ಪ್ರಸ್ತುತ ಕೋವಿಡ್ ಸೋಂಕಿತರು ಪತ್ತೆಯಾದ ಪ್ರದೇಶ, ಅವರ ಸಂಪರ್ಕಕ್ಕೆ ಬಂದವರು, ಉಸಿರಾಟ ಸಮಸ್ಯೆ, ಶೀತಜ್ವರ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಖಾನೆ, ಗಾರ್ಮೆಂಟ್ಸ್​, ಹೋಟೆಲ್‌ಗಳು ಹಾಗೂ ಹೆಚ್ಚು ಕಾರ್ಮಿಕರಿರುವ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುವುದು. ಇದಕ್ಕಾಗಿ ಸ್ವಾಬ್ ಟೆಸ್ಟ್ ಮಾಡಲು 148 ಮಂದಿ ನೇಮಕ ಮಾಡಿಕೊಂಡು, ಮೊಬೈಲ್ ಪರೀಕ್ಷಾ ತಂಡಗಳನ್ನು ರಚಿಸಲಾಗುವುದು. ಬಿಬಿಎಂಪಿ ಟೆಂಡರ್ ಮೂಲಕ 5 ಲಕ್ಷ ಟೆಸ್ಟಿಂಗ್ ಕಿಟ್ ತರಿಸಲು ಸಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮನೆಯಲ್ಲಿನ ಸೋಂಕಿತರಿಗೆ ಕಿಟ್: ಪಾಲಿಕೆ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕಿತರ ಪೈಕಿ ಶೇ.52 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದು, ಪ್ರತಿ 24 ಗಂಟೆಗೊಮ್ಮೆ ಆರೋಗ್ಯ ಪರಿಶೀಲನೆ ಮಾಡಲಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವ ಎಲ್ಲ ಸೋಂಕಿತರಿಗೆ ಒಂದೇ ರೀತಿಯ ಕೋವಿಡ್ ಕಿಟ್ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಐಸೋಲೇಷನ್ ಕಿಟ್‌ಗಳಲ್ಲಿ ಔಷಧಗಳ ಜತೆಗೆ ಎಷ್ಟು ಪ್ರಮಾಣದಲ್ಲಿ ಯಾವಾವ ಅವಧಿಗೆ ಬಳಸಬೇಕು ಎಂಬ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಕಿಟ್ ವಿತರಣೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದರು.