ಮುಂದಿನ ತಲೆಮಾರಿನ ಯುವ ಸಮುದಾಯಕ್ಕೆ ನಿಸ್ವಾರ್ಥ ಮತ್ತು ಸ್ವಾಸ್ಯ ಸಮಾಜವನ್ನು ಕಾಪಾಡಿಕೊಂಡು ಹೋಗುವ ಮತ್ತು ಸ್ವಚ್ಛವಾದ ಗಾಳಿ, ನೀರು, ಬೆಳಕು ಇರುವ ಸುಂದರ ಪರಿಸರವನ್ನು ಉಳಿಸಿ ಹೋಗಬೇಕಾಗಿರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅದಮ್ಯ ರಂಗ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ ಹೇಳಿದರು.
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ (ಸ್ವಾಯತ್ತ) ವತಿಯಿಂದ ಎಚ್.ಡಿ.ಕೋಟೆ ತಾಲೂಕಿನ ಮಂಟಿ ಹಾಡಿಯಲ್ಲಿ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಉನ್ನತ ವ್ಯಾಸಂಗ ಮಾಡಿ ಪದವಿ ಪಡೆದು ಐಟಿ-ಬಿಟಿ, ಡಾಕ್ಟರ್, ಇಂಜಿನಿಯರ್ ಗಳಂತಹ ಹುದ್ದೆಗಳು ಮಾತ್ರವೇ ಸಮಾಜದಲ್ಲಿ ನಮಗೆ ಗೌರವ ತಂದು ಕೊಡುತ್ತವೆ ಎಂದು ಭಾವಿಸಿದ್ದಾರೆ. ಕೃಷಿ ಮಾಡುವುದು ಅತ್ಯಂತ ಹೀನ ಕೆಲಸ ಎಂದು ವ್ಯವಸಾಯದ ಕಡೆ ಅಸಡ್ಡೆ ಮಾಡಿದ್ದಾರೆ. ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಒಂದೊಂದು ತುತ್ತಿನ ಅನ್ನಕ್ಕೂ ಹಾಹಾಕಾರ ಪಡಬೇಕಾಗಿರುವ ಕಾಲ ದೂರ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಂದೆ, ತಾಯಿ ಹಾಗೂ ಗುರು ಹಿರಿಯರನ್ನು ಪ್ರೀತಿಸುವ ಮತ್ತು ಗೌರವಿಸುವ ಸಂಸ್ಕೃತಿಯನ್ನು ಇತ್ತೀಚೆಗೆ ಯುವಕ ಮತ್ತು ಯುವತಿಯರು ಮರೆಯುತ್ತಿದ್ದಾರೆ. ಪಾಲಕರು ಮತ್ತು ಗುರು ಹಿರಿಯರನ್ನು ಗೌರವಿಸಿದ ನೀವುಗಳು ಎಷ್ಟೇ ಉತ್ತುಂಗಕ್ಕೆ ಏರಿದರೂ ವನ್ಯಮೃಗಗಳಿಗಿಂತಲೂ ಕಡೆಯಾಗುವಿರಿ ಎಂದರು.
ಪ್ರೊ.ಎಚ್.ಬಿ.ದೇವಣ್ಣ, ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿದರು. ಮುಖಂಡ ಎನ್.ಕುಂಟೆಗೌಡ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಎನ್. ಸಂತೋಷ್ ಕುಮಾರ್, ರಾಷ್ಟ್ರೀಯ ರುಡ್ ಸೆಟ್ ಸಂಸ್ಥೆ ನಿವೃತ್ತ ಮಹಾ ನಿರ್ದೇಶಕ ಎಚ್.ಸೋಮಶೇಖರ್, ಜಾನಪದ ಗಾಯಕರಾದ ಅಮ್ಮ ರಾಮಚಂದ್ರ, ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಡಾ.ಬೀರಪ್ಪ, ನಂದಿನಿ, ವಿಜಯ ನಾರಾಯಣಗೌಡ ಇದ್ದರು.