ಜಿಲ್ಲೆ

ಮಹಿಳೆ ಮನಸ್ಸು ಮಾಡಿದರೆ ಏನು ಬೇಕಿದ್ದರೂ ಸಾಧಿಸಿಯಾಳು

ಮೈಸೂರು: ಮಹಿಳೆಯರು ಸಾಧಿಸಬೇಕು ಎಂದು ಹೊರಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಉದಾರಣೆಯಾಗಿದ್ದೇನೆ ಎಂದು ಸಮುದ್ರ ಚಿಪ್ಪುಗಳನ್ನು ಬಳಸಿ ಅತ್ಯಾದ್ಭುತ ಕಲಾಕೃತಿಗಳನ್ನು ನಿರ್ಮಿಸಿ ಗಿನ್ನೆಸ್ ದಾಖಲೆ ಬರೆದ ಡಾ.ರಾಧಾ ಮಲ್ಲಪ್ಪ ಹೇಳಿದರು.

ಮಹಿಳಾ ದಸರಾ ಅಂಗವಾಗಿ ಜೆಕೆ ಮೈದಾನಲ್ಲಿ ಮಂಗಳವಾರ ಮಹಿಳೆಯರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಡತನದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಶಿಕ್ಷಣ ಮಾತ್ರ ಪೂರೈಸುವಂತಾಯಿತು. ಏನನ್ನಾದರೂ ಮಾಡಬೇಕೆಂಬ ಛಲದಿಂದ ಕಲಾಕೃತಿ ನಿರ್ಮಿಸಿದ ಸಲುವಾಗಿ ಡಾಕ್ಟರೇಟ್ ದೊರೆತಿದೆ. 40 ವರ್ಷಗಳಿಂದ ಕಷ್ಟ ಪಟ್ಟಿದ್ದರ ಸಲುವಾಗಿ ವಿಶ್ವ ದಾಖಲೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಕಪ್ಪೆ ಚಿಪ್ಪುಗಳಿಗೆ ಯಾವುದೇ ಬಣ್ಣ ಬಳಸದೆ ಕಲಾಕೃತಿಗಳನ್ನು ರಚಿಸಲಾಗಿದೆ. ಶೇ.20ರಷ್ಟು ಜನ ದೇಶೀಯರು ಮ್ಯೂಸಿಯಂಗೆ ಬಂದರೆ, ಉಳಿದಂತೆ ಶೇ.80ರಷ್ಟು ವಿದೇಶಿಯರೇ ಮ್ಯೂಸಿಯಂಗೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಚಿಪ್ಪುಗಳನ್ನು ಖರೀದಿಸಬಹುದಾಗಿದೆ ಕೆಲವೊಂದನ್ನು ಖುದ್ದಾಗಿ ಸಂಗ್ರಹಿಸಬೇಕಾಗುತ್ತದೆ. ಹಸಿರು ಚಿಪ್ಪುಗಳ ಸಂಗ್ರಹದ ವೇಳೆ ಶುದ್ಧ ಸಸ್ಯಾಹಾರಿಗಳಾದ ನಾವು ಮಾಂಸದ ಅಂಗಡಿಯ ತ್ಯಾಜ್ಯ ಸುರಿಯುವ ಜಾಗದಲ್ಲಿ ಚಿಪ್ಪುಗಳನ್ನು ಆಯ್ದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು ಎಂದರು.

16ನೇ ವಯಸ್ಸಿನಿಂದ ಸಮುದ್ರ ಚಿಪ್ಪುಗಳ ಸಂಗ್ರಹ ಹಾಗೂ ಕಲಾಕೃತಿಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು, ತಾಯಿಯ ಸಹಕಾರದಿಂದ ಸಾಧನೆಯ ಹಾದಿಯಲ್ಲಿ ತೆರಳಲು ಸಾಧ್ಯವಾಯಿತು. ಸದ್ಯ ಪತಿ ಮಲ್ಲಪ್ಪ ಸಹಕಾರ ಗಣನೀಯವಾದುದು ಎಂದು ಹೇಳಿದರು.