ಹುಬ್ಬಳ್ಳಿ:ಉತ್ತಮ ಮಾರ್ಗದರ್ಶನದೊಂದಿಗೆ ಸರಿಯಾದ ವಯಸ್ಸಿನಲ್ಲಿ ತೆಗೆದುಕೊಂಡ ನಿರ್ಧಾರವು ಖಂಡಿತವಾಗಿಯೂ ಉತ್ತಮ ವೃತ್ತಿ ಆಯ್ಕೆಯೊಂದಿಗೆ ಕೊನೆಗೊಳ್ಳುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ಹುಬ್ಬಳ್ಳಿಯ ಐಇಎಂಎಸ್ ಬಿ-ಸ್ಕೂಲ್ನಲ್ಲಿ ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉತ್ತರ ಕರ್ನಾಟಕ ಕರಿಯರ್ ಕಾನ್ಕ್ಲೇವ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತೊಬ್ಬರನ್ನು ನಕಲು ಮಾಡುವ ಬದಲು ತಮಗೆ ಇಷ್ಟವಾದ ಕನಸನ್ನು ಕಷ್ಟಪಟ್ಟು ನನಸಾಗಿಸಿಕೊಳ್ಳಬೇಕು ಎಂದರು.
ನಾವಿಂದು ಗ್ರಾಮೀಣ ಭಾರತದ ಸಾಂಪ್ರದಾಯಿಕ ಜೀವನಶೈಲಿಯನ್ನು ಅಭ್ಯಾಸ ಮಾಡುವಲ್ಲಿ ವಿಫಲರಾಗಿದ್ದೇವೆ. ನಮ್ಮ ಹಿರಿಯರು ತಮ್ಮ ದೈನಂದಿನ ಜೀವನದಲ್ಲಿ ನೇಕಾರಿಕೆ, ಹೊಲಿಗೆ, ಪೇಂಟಿಂಗ್, ಡ್ರಾಯಿಂಗ್ ಇತ್ಯಾದಿಗಳನ್ನು ಅಳವಡಿಸಿಕೊಂಡಿದ್ದರು. ಇಂದಿನ ಪೀಳಿಗೆಯು ಮೊಬೈಲ್ ಆಟಗಳಲ್ಲಿ ಮಗ್ನವಾಗಿದೆ ಎಂದರು.
ಕೈಜೆನ್ ಎಡುಪ್ಲಸ್ ಸೊಸೈಟಿಯ ಗೌರವಾಧ್ಯಕ್ಷ ಡಾ. ಎನ್.ಎ. ಚರಮತಿಮಠ ಮಾತನಾಡಿ, ವೃತ್ತಿ ಜೀವನದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಮನಸ್ಸು ಮಾಡುವುದು ಯಶಸ್ಸಿನ ಮೊದಲ ಮಂತ್ರವಾಗಿದೆ. ಸ್ನೇಹಿತರು, ಕುಟುಂಬದವರೊಂದಿಗಿನ ಸೌಹಾರ್ದಯುತ ಸಂಬಂಧವು ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಗುರುಕುಲ ಕರಿಯರ್ ಅಕಾಡೆಮಿ ನಿರ್ದೇಶಕ ನಾಗನಗೌಡ ಪಾಟೀಲ, ಪೊ›ಫಿಸೆಂಟ್ ಮೈಂಡ್ಸ್ ನಿರ್ದೇಶಕ ಸುಹಾಸ ರಜಪೂತ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ. ಕೆ. ಸ್ವಾಗತಿಸಿದರು. ಧಾರವಾಡದ ಎನ್ಎಸ್ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಬಸವರಾಜ ತಲ್ಲೂರು, ಡಾ.ಪೂರ್ಣಿಮಾ ಚರಂತಿಮಠ, ಪ್ರೊ. ವಿನಾಯಕ ಉಪರಾಟೆ, ಪ್ರೊ. ಪ್ರೀತಿ ಬೆಳಗಾವಿಕರ ಇದ್ದರು. ವಿವಿಧ ಕಾಲೇಜುಗಳಿಂದ 212 ವಿದ್ಯಾರ್ಥಿಗಳು ಭಾಗವಹಿಸಿದ್ದರು.