ಚಳ್ಳಕೆರೆ: ತಾಲೂಕಿನ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯ ನಿವಾಸಿಗಳು ನಾಗರಪಂಚಮಿ ಹಿನ್ನೆಲೆಯಲ್ಲಿ ಪರಶುರಾಂಪುರ ಸಮೀಪದ ಕಾವಲು ಭೂಮಿಯಲ್ಲಿರುವ ಈಚೆಗೆ ಚೆಲ್ಲೂರಜ್ಜನ ಸನ್ನಿಧಾನದ ನಾಗರ ವಿಗ್ರಹಗಳಿಗೆ ಅನ್ನ, ಹುಣಸೇ ಹುಳಿ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.
ವಿಶೇಷ: 35 ಕಿಮೀ ದೂರದ ಚೆಲ್ಲೂರಜ್ಜನ ಸನ್ನಿಧಾನಕ್ಕೆ ನಗರದ ಕಾಟಪ್ಪನಹಟ್ಟಿಯಲ್ಲಿರುವ ರಂಗಸ್ವಾಮಿ, ಯತ್ತಪ್ಪ ದೇವಸ್ಥಾನಗಳಲ್ಲಿ ಪೂಜೆ ಮಾಡಿಕೊಂಡು ಹೊರಡುವ ಪೂಜಾರಿ, ದಾಸಪ್ಪ ಅವರ ಜತೆಯಲ್ಲಿ ಬರಿಗಾಲಲ್ಲಿ ನಡೆದುಕೊಂಡು ನೂರಾರು ಭಕ್ತರು ಆಗಮಿಸಿದರು.
ಪೂಜಾ ಸಾಮಗ್ರಿಗಳೊಂದಿಗೆ ಕಾವಲುಭೂಮಿಗೆ ಆಗಮಿಸಿದ ಭಕ್ತರು ಹುತ್ತ ಮತ್ತು ನಾಗರ ಕಲ್ಲುಗಳಿಗೆ ಹಾಲು ಎರೆಯುವ ಬದಲು ಅನ್ನ ಮತ್ತು ಹುಣಸೇ ಹುಳಿ ನೈವೇದ್ಯ ಅರ್ಪಿಸಿದರು. ಕಂಕಣ ಭಾಗ್ಯ, ಸಂತಾನ, ಉದ್ಯೋಗ, ವ್ಯಾಪಾರದಲ್ಲಿ ಹೆಚ್ಚಳ ಸೇರಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಬೇಕು ಎಂದು ಬೇಡಿಕೊಂಡರು.
ಪರುವು: ಪೂಜಾ ಸ್ಥಳದಿಂದ ಮರಳಿ ಗ್ರಾಮಕ್ಕೆ ಬರುವ ಭಕ್ತರು ಮರುದಿನ ದೊಡ್ಡೇರಿ ಸಮೀಪ ಎದುರೊತ್ತು ಪೂಜೆ ನೆರವೇರಿಸಿ ಪರುವು ಮಾಡಿದರು. ಉತ್ತಮ ಮಳೆ-ಬೆಳೆ ಆಗಲೆಂದು ದೇವರಲ್ಲಿ ಬೇಡಿಕೊಳ್ಳುವ ವಿಶೇಷ ಆಚರಣೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ಗೌಡ್ರು ಚಿಕ್ಕಣ್ಣ, ರಾಜಣ್ಣ, ರಂಗನಾಥ, ಅಜ್ಜಯ್ಯ, ಮಂಜುನಾಥ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಪೂಜಾರಿ ಸುರೇಶ್, ದಾಸಪ್ಪ, ರಂಗಸ್ವಾಮಿ, ವೀರೇಶ್ ಇತರರಿದ್ದರು.