ಚಾಮರಾಜನಗರ: ಕಾಡಿನ ಜನರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳೇ ವಿಶೇಷ. ಪರಂಪರೆ, ದೈವಿಕತೆಯನ್ನು ಮುಂದುವರೆಸಿಕೊಂಡು ಹೋಗುವ ಪರಿಯೂ ವಿಶಿಷ್ಟ. ಇದಕ್ಕೆ ಉದಾಹರಣೆ ಎಂಬಂತೆ ದಟ್ಟ ಕಾಡಿನ ಪೋಡಿನ ಜನರಿಗೆ ‘ಕ್ಯಾತಪ್ಪ’ ದೇವರ ಆರಾಧನೆಯೇ ಸರ್ವಸ್ವ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ 6 ವಲಯಗಳಲ್ಲಿ ಒಂದಾದ ಕೆ.ಗುಡಿಯಲ್ಲಿರುವ ಬೂತಾನಿಪೋಡಿನಲ್ಲಿ ಶ್ರೀಮಲೆಮಹದೇಶ್ವರ ಸ್ವಾಮಿ ಸ್ವರೂಪಿಯಾದ ಶ್ರೀ ಕ್ಯಾತೇಶ್ವರ ದೇವರ ಗುಡಿ ಇದ್ದು, ಪೋಡಿನಲ್ಲಿ ವಾಸ ಮಾಡುತ್ತಿರುವ ಸುಮಾರು 30 ಕುಟುಂಬಗಳು ಅಪಾರ ಭಕ್ತಿಯಿಂದ ಕ್ಯಾತಪ್ಪನನ್ನು ಪೂಜಿಸುತ್ತವೆ. ವಿಭಿನ್ನ ಆಚರಣೆಗಳನ್ನು ಅನುಸರಿಸುವ ಮೂಲಕ ಸಕಲ ಜೀವ ರಾಶಿಗಳಲ್ಲೂ ಭಗವಂತನನ್ನು ಕಾಣುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಡವಿಯ ಗುಡಿ: ತಾಲೂಕಿನ ಕೆ.ಗುಡಿಯಿಂದ ಕನ್ನೇರಿಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಗುವ ಬೂತಾನಿಪೋಡಿನಿಂದ 1ಕಿ.ಮೀ ದೂರ ನಡೆದರೆ ಅಡವಿಯೊಳಗೆ ಕ್ಯಾತೇಶ್ವರನ ಗುಡಿಯನ್ನು ಕಾಣಬಹುದು.
ಹಲವು ವರ್ಷಗಳ ಹಿಂದೆ ಬಿಳಿಗಿರಿರಂಗನ ಬೆಟ್ಟದ ಮೂಲೆ ಮೂಲೆಗಳಲ್ಲಿ ವಾಸ ಮಾಡುತ್ತಿದ್ದ ಸೋಲಿಗರಿಗೆ ಅರಣ್ಯ ಇಲಾಖೆ ಒಂದೆಡೆ ನೆಲೆಸುವಂತೆ ಸೌಲಭ್ಯ ಕಲ್ಪಿಸಿಕೊಟ್ಟಿತ್ತು. ಅದರಂತೆ ಬೂತಾನಿಪೋಡಿನಲ್ಲಿ ವಾಸ ಆರಂಭಿಸಿದ ಜನರು ಮಾದಪ್ಪ ಸ್ವರೂಪಿ ಕ್ಯಾತಪ್ಪನ ಆರಾಧನೆಯಲ್ಲಿ ತೊಡಗಿದರು.
ಕೆ.ಗುಡಿಯ ಅರಣ್ಯ ಇಲಾಖೆ ಪ್ರವಾಸಿ ಮಂದಿರದ ಬಳಿ ಇರುವ ಶ್ರೀ ಕ್ಯಾತೇಶ್ವರ ದೇವರ ಮೂಲ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲು ದೂರವಾಗಲಿದೆ ಎಂಬ ಕಾರಣಕ್ಕೆ ಪೋಡಿಗೆ ಸಮೀಪವಿರುವ ಕಾಡಿನಲ್ಲಿ ದೇವರಿಗಾಗಿ ಗುಡಿಸಲು ಕಟ್ಟಿ ಪೂಜೆ ಪುನಸ್ಕಾರ ನಡೆಸಲಾರಂಭಿಸಿದರು.
ಮೂರ‌್ನಾಲ್ಕು ವರ್ಷಗಳ ಹಿಂದೆ ಕಾಡಾನೆಗಳ ಹಿಂಡು ದೇವಸ್ಥಾನದ ಗುಡಿಸಲನ್ನು ಹಾನಿಗೊಳಪಡಿಸಿದ ಕಾರಣ ಪೋಡಿನ ಅಂಚಿನಲ್ಲೇ ಮತ್ತೆ ದೇಗುಲವನ್ನು ಗ್ರಾಮಸ್ಥರು ನಿರ್ಮಿಸಿದ್ದಾರೆ.
ಸದ್ಭಕ್ತಿಯ ಝೇಂಕಾರ: ಸಾವಿರಾರು ಭಕ್ತರು, ಸಾಮಾನ್ಯ ಮತ್ತು ವಿಶೇಷ ದರ್ಶನಗಳ ಸರತಿ ಸಾಲಿನಲ್ಲಿ ನಿಂತು ದಿನವಿಡೀ ದೇವರ ದರ್ಶನ ಪಡೆಯುವ ಪರಿಸ್ಥಿತಿ ಇಲ್ಲದಿದ್ದರೂ ಭಕ್ತಿಯ ಝೇಂಕಾರ ಮೊಳಗುವುದರಲ್ಲಿ ಸಂಶಯವಿಲ್ಲ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿರುವ ಕ್ಯಾತಪ್ಪನ ಪುಟ್ಟ ಗುಡಿ ಎತ್ತರದ ಗಿರಿಯ ನಡುವೆ ಕಂಗೊಳಿಸುತ್ತಿದೆ. ಗಾಳಿ ಮತ್ತು ಕಾಡು ಪ್ರಾಣಿಗಳ ಸದ್ದಿನ ಹೊರತಾಗಿ ಬೇರ‌್ಯಾವ ಶಬ್ದವೂ ಕೇಳದ ನಿಶ್ಯಬ್ದ ಮತ್ತು ಪ್ರಶಾಂತ ವಾತಾವರಣದಲ್ಲಿ ಮೊಳಗುವ ಘಂಟೆಯ ನಿನಾದ ಭಕ್ತಿಯ ಪರಾಕಾಷ್ಠೆಯನ್ನೂ ಮೀರಿಸಲಿದೆ.
ದೇಗುಲದ ಆವರಣದಲ್ಲಿರುವ ಗಿಡ-ಮರಗಳ ಬುಡದಲ್ಲಿರುವ ಲಿಂಗವನ್ನು ಹೋಲುವ ಕಲ್ಲುಗಳು ಪೂಜೆಗೆ ಸಲ್ಲುತ್ತವೆ. ದೇವರ ತಮ್ಮಡಿ ಸಾರಥ್ಯದಲ್ಲಿ ಶ್ಲೋಕ, ಮಂತ್ರಗಳಿಲ್ಲದೆ ಕ್ಯಾತಪ್ಪನಿಗೆ ನಡೆಯುವ ಪುನಸ್ಕಾರ ಧನ್ಯತಾ ಭಾವ ತರುತ್ತದೆ.
ಶ್ರೀ ಕ್ಯಾತೇಶ್ವರ ದೇವರಿಗೆ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಸಲ್ಲುತ್ತದೆ. ಈ ವೇಳೆ ದೇವಸ್ಥಾನದ ಆವರಣದಲ್ಲಿ ಭಕ್ತರು ಅಡುಗೆ ಮಾಡಿ ಪ್ರಸಾದ ವಿನಿಯೋಗ ನೆರವೇರಿಸುವ ಪ್ರತೀತಿ ಚಾಲ್ತಿಯಲ್ಲಿದೆ.
ಯುಗಾದಿ ಹಬ್ಬದ ನಂತರ ಇಲ್ಲಿ ಜಾತ್ರೆ ನಡೆಯುತ್ತದೆ. ಕಳೆದ ಎರಡು ವರ್ಷಗಳಿಂದ ಕಾರಣಾಂತರಗಳಿಂದ ಜಾತ್ರೆಯನ್ನು ಮಾಡಲಾಗಿಲ್ಲ. ಆದರೆ ಈ ಹಿಂದಿನ ವರ್ಷಗಳಲ್ಲಿ ನಡೆದ ಜಾತ್ರೆಯಲ್ಲಿ ಕ್ಯಾತೇಶ್ವರ ದೇವರನ್ನು ಹುಲಿ ವಾಹನದಲ್ಲಿ ಕೂರಿಸಿ ಮೆರವಣಿಗೆ ಮಾಡಿ ಹಬ್ಬ ಮಾಡಲಾಗಿತ್ತು. ಇತರೆ ದಿನಗಳಲ್ಲಿ ದೇಗುಲಕ್ಕೆ ಅಕ್ಕ-ಪಕ್ಕದ ಗ್ರಾಮಗಳ ಜನರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
‘ರಕ್ಷಕ’ ಕ್ಯಾತಪ್ಪ: ಕಾಡಿನಲ್ಲಿ ಪೋಡಿನಲ್ಲಿ ವಾಸ ಮಾಡುತ್ತಿರುವ ಜನರಿಗೆ ಕ್ಯಾತಪ್ಪ ದೇವರೇ ಮಹಾರಕ್ಷಕ. ವನ್ಯಮೃಗಗಳಿಂದ ದೇವರು ತಮ್ಮನು ಕಾಪಾಡುತ್ತಾನೆ ಎಂಬ ನಂಬಿಕೆಯನ್ನು ಇಲ್ಲಿನ ಜನರು ಹೊಂದಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಪ್ರಾಣಿಗಳು ಹಾನಿ ಮಾಡದಿರಲು ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸಿ ರೊಟ್ಟಿ ಹಬ್ಬ ಮಾಡಿ ಸಂತೃಪ್ತಿಗೊಳಿಸುವ ವಿಶೇಷ ಪೂಜಾ ವಿಧಿ-ವಿಧಾನವೂ ಆಚರಣೆಯಲ್ಲಿದೆ.
ಕ್ಯಾತಪ್ಪ ದೇವರೇ ನಮ್ಮ ದೈವ. ಕಷ್ಟಗಳ ಪರಿಹಾರಕ್ಕಾಗಿ ಹರಕೆ ಹೊತ್ತವರಿಗೆ ಒಳ್ಳೆಯದಾಗಿದೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ದೇವಸ್ಥಾನ ಇರುವುದರಿಂದ ಅರಣ್ಯ ಇಲಾಖೆ ಗುಡಿ ಕಟ್ಟಿಸಿಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಚನ್ನಂಜೇಗೌಡ, ದೇವಸ್ಥಾನದ ತಮ್ಮಡಿ.