ವಿಟ್ಲ: ಇಡ್ಕಿದು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಮಹಿಳೆಯ ಜತೆಗೆ ಅನುಚಿತವಾಗಿ ವರ್ತಿಸಿದ ಉಪಾಧ್ಯಕ್ಷ ಪದ್ಮನಾಭ ಸಭೆಗೆ ಗೈರಾಗಿದ್ದು, ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಸಾರ್ವಜನಿಕರಿಂದ ಬಂದ ಅರ್ಜಿಗಳ ಪೈಕಿ ಪಂಚಾಯಿತಿ ಉಪಾಧ್ಯಕ್ಷ ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ ತೋರಿಸಿದ್ದು, ಈ ಬಗ್ಗೆ ದೂರು ನೀಡಿದ ಮಹಿಳೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು ಸಭೆಯ ಗಮನಕ್ಕೆ ತರಲಾಯಿತು.
ಜನರಿಂದ ಆಯ್ಕೆಯಾದ ಜನಪ್ರತಿನಿಽಯ ಇಂತಹ ಅಸಭ್ಯ ವರ್ತನೆ ಪಂಚಾಯಿತಿಯ ಗೌರವ ಮತ್ತು ಪ್ರಸ್ತುತ ಆಯ್ಕೆಯಾಗಿರುವ ಎಲ್ಲ ಸದಸ್ಯರ ಗೌರವ ಮತ್ತು ಘನತೆಗೆ ಚ್ಯುತಿ ತರುವಂತದ್ದಾಗಿದೆ. ವೈಯುಕ್ತಿಕ ವಾದ ವಿವಾದ ತಕರಾರುಗಳನ್ನು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥಗೊಳಿಸಬೇಕಾಗಿದ್ದು, ಸಂಯಮದಿಂದ ಇರಬೇಕಾಗಿರುವುದು ಜನಪ್ರತಿನಿಽಯ ಕರ್ತವ್ಯ. ಮೇಲ್ನೋಟಕ್ಕೆ ಪದ್ಮನಾಭ ಅಪರಾಧವೆಸಗಿರುವುದು ಸ್ಪಷ್ಟವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವಯುತವಾಗಿ ನಡೆದುಕೊಳ್ಳದೆ ಇರುವ ಬಗ್ಗೆ ಎಲ್ಲ ಸದಸ್ಯರು ಖಂಡನಾ ನಿರ್ಣಯಕ್ಕೆ ಆಗ್ರಹಿಸಿದರು.