ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 10 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರವೇ ಸಾಕೇತಿಕವಾಗಿ ಗುರುತಿನ ಚೀಟಿ ನೀಡಲಾಗಿದೆ ಹೊರತು ಬೆರೆ ಯಾವ ವ್ಯಾಪಾರಿಗೂ ಗುರುತಿನ ಚೀಟಿ ನೀಡಿಲ್ಲ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ 18 ಷರತ್ತುಗಳನ್ನು ಒಪ್ಪಿ ಅಫಿದಾವಿತ್ ಸಲ್ಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಉಳಿದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯವಾಗಿಲ್ಲ. ಮನಪಾ ಗುರುತಿನ ಚೀಟಿ ನೀಡಿ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿಗಳ ಆರೋಪ ನಿರಾಧಾರ ಎಂದರು.
ನಗರದ ಹೃದಭಾಗವಾದ ಕೆಪಿಟಿ ರಸ್ತೆ, ಲೇಡಿಗೋಶನ್, ಸ್ಟೇಟ್‌ಬ್ಯಾಂಕ್, ಕಂಕನಾಡಿ, ಪಂಪ್‌ವೆಲ್, ಸುರತ್ಕಲ್ ಸೇರಿದಂತೆ ವಿವಿಧ ಕಡೆ ಸಾವಿರಾರು ಸಂಖ್ಯೆಯಲ್ಲಿ ಗೂಡಂಗಡಿಗಳು, ಬೀದಿ ಬದಿ ವ್ಯಾಪಾರ ನಡೆಯುತ್ತಿದೆ. ಕಾರ್ಯಾಚರಣೆ ವೇಳೆ ಬಹುತೇಕ ಆಹಾರ ಪೂರೈಕೆಯ ಗೂಡಂಗಡಿಗಳು ಸೇರಿದಂತೆ ಬೀದಿ ಬದಿ ವ್ಯಾಪಾರದ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ, ಜಿರಳೆ, ರಾಶಿ ಹೆಗ್ಗಣಗಳ ರಾಶಿ ಕಂಡು ಬಂದಿದೆ. ಕೆಲ ಗೂಡಂಗಡಿಗಳಲ್ಲಿ ಶರಾಬು ಮಾರಾಟ, ಆಹಾರ ಪದಾರ್ಥಗಳಿಗೆ ಅಜಿನೊಮೋಟೋ ಮೊದಲಾದ ಪದಾರ್ಥಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ಈಗಾಗಲೇ ಡೆಂಗಿ, ಮಲೇರಿಯಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಪಾದಾಚಾರಿಗಳಿಗೆ ಅನಧಿಕೃತ ಗೂಡಂಗಡಿ, ಬೀದಿ ಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿರುವುದರಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು.
ಬೀದಿಬದಿ ವ್ಯಾಪಾರವೆಂದರೆ, ಕುಳಿತುಕೊಂಡು, ತಳ್ಳುಗಾಡಿ ಅಥವಾ ತಲೆಯಲ್ಲಿ ಹೊತ್ತು ವ್ಯಾಪಾರ ಮಾಡುವುದಾಗಿದೆ. ಅದಕ್ಕಾಗಿ ನಗರದಲ್ಲಿ 10 ಕಡೆಗಳಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸಿ ನಗರ ಯೋಜನಾ ಸಮಿತಿಯಲ್ಲಿ ನಿರ್ಧರಿಸಿ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ನಗರದ ಎರಡು ಪ್ರಮುಖ ರಸ್ತೆಗಳನ್ನು ಗುರುತಿಸಿ ಟೆಂಡರ್ ಮೂಲಕ ‘ಫುಡ್ ಸ್ಟ್ರೀಟ್’ ವ್ಯವಸ್ಥೆ ಕಲ್ಪಿಸಲು ಕೂಡಾ ಪಾಲಿಕೆ ಮುಂದಾಗಿದೆ ಎಂದು ಮೇಯರ್ ತಿಳಿಸಿದರು.
ನಗರದಲ್ಲಿ 2500ರಷ್ಟು ತಳ್ಳುಗಾಡಿ, ಗೂಡಂಗಡಿಗಳಿವೆ. ಒಬ್ಬರ ಹೆಸರಿನಲ್ಲಿ 200ಕ್ಕೂ ಅಧಿಕ ತಳ್ಳುಗಾಡಿಗಳಿರುವುದು ಗಮನಕ್ಕೆ ಬಂದಿದೆ ಎಂದು ಮೇಯರ್ ಹೇಳಿದರು.
ನಗರದಲ್ಲಿ ವ್ಯಾಪಾರ ವಲಯ ಮಾಡುವ ಬಗ್ಗೆ ಕಳೆದ ಹಲವು ವರ್ಷಗಳಿಂದ ಪಾಲಿಕೆ ಹೇಳುತ್ತಲೇ ಬಂದಿದ್ದರೂ ಇನ್ನೂ ಮಾಡಲಾಗಿಲ್ಲ. ಸೂಕ್ತ ವ್ಯವಸ್ಥೆ ಮಾಡದೆ ಈ ರೀತಿ ಬೀದಿಬದಿಗಳ ಮೇಲೆ ಟೈಗರ್ ಕಾರ್ಯಾಚರಣೆ ಮಾಡುವುದು ಸರಿಯೇ ಎಂಬ ಪ್ರಶ್ನೆಗೆ, ಪ್ರಧಾನ ಮಂತ್ರಿಗಳ ದೀನ್‌ದಯಾಲ್ ಸ್ವನಿಧಿ ಯೋಜನೆಯಡಿ ಈಗಾಗಲೇ 667 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಷರತ್ತುಗಳಿಗೆ ಬದ್ಧರಾಗಲು ಯಾರೂ ಒಪ್ಪದ ಕಾರಣ ಕೇವಲ 10 ಮಂದಿಗೆ ಮಾತ್ರವೇ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಲಾಗಿದೆ ಎಂದರು.
ಬೀದಿಬದಿ ವ್ಯಾಪಾರಿಗಳು ಷರತ್ತಿಗೆ ಒಪ್ಪಿಲ್ಲದ ಮೇಲೆ, ಗುರುತಿನ ಚೀಟಿ ನೀಡಲಾಗಿಲ್ಲ ಎಂದ ಮೇಲೆ ಪಿಎಂ ಸ್ವನಿಧಿಯಲ್ಲಿ ಸಾಲ ಯಾವ ಆಧಾರದಲ್ಲಿ ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಿಎಂ ಸ್ವನಿಧಿ ಯೋಜನೆಯಡಿ 667 ಮಂದಿ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡಲಾಗಿದೆ. ಅವರಲ್ಲಿ 63 ಮಂದಿ ತಳ್ಳುಗಾಡಿ ವ್ಯಾಪಾರಿಗಳು. ಕೆಲವರು ಮನೆಗಳಲ್ಲೇ ಆಹಾರ ತಯಾರಿಸಿ ಮಾರಾಟ ಮಾಡುವವರೂ ಇದ್ದಾರೆ ಎಂದರು.
ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ಲೋಹಿತ್ ಅಮೀನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.