ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಿವಿಧ ರೀತಿಯಲ್ಲಿ ಬ್ಯಾಡ್ಜ್ ಹಾಗೂ ಪಾಸ್ ಸಿದ್ಧಪಡಿಸಬೇಕು ಎಂದು ಮನ್‌ಮುಲ್, ಪಾಸ್ ಮತ್ತು ಬ್ಯಾಡ್ಜ್ ಸಮಿತಿ ಅಧ್ಯಕ್ಷ ಬೋರೇಗೌಡ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನದಲ್ಲಿ ಗಣ್ಯರು, ಅತಿಗಣ್ಯರು, ಸಾಹಿತಿಗಳು ಸೇರಿದಂತೆ ವಿವಿಧ ಸಮಿತಿಗಳಿಗೆ ಬೇಕಿರುವ ಗುರುತಿನ ಚೀಟಿಯನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.
ಇದಲ್ಲದೆ ಸ್ವಯಂ ಸೇವಕರು, ನೋಂದಣಿ ಮಾಡಿಕೊಳ್ಳುವವರು, ಕಲಾವಿದರು, ಅಧಿಕಾರಿಗಳು, ಕೆಲಸ ನಿರ್ವಹಿಸುವವರು ಸೇರಿದಂತೆ ವಿನ್ಯಾಸಗಳನ್ನು ಸಿದ್ಧಪಡಿಸಿಕೊಳ್ಳಿ.
ವಿವಿಧ ವಿಭಾಗವನ್ನು ಗುರುತಿಸಿ ಬೇರೆಬೇರೆ ಬಣ್ಣದ ಹಾಗೂ ವಿನ್ಯಾಸದ ಗುರುತಿನ ಚೀಟಿ ಬೇಕಾಗುತ್ತದೆ. ಈಗಿನಿಂದಲೇ ವಿಧಗಳು ಹಾಗೂ ಅಂದಾಜು ಸಂಖ್ಯೆಗಳನ್ನು ಪಟ್ಟಿ ಮಾಡಿಕೊಳ್ಳಿ. ಗುರುತಿನ ಚೀಟಿ ವಿತರಣೆ ಕೂಡ ಮಹತ್ತರವಾದ ಕೆಲಸವಾಗಿದ್ದು, ಒಂದೊಂದು ವಿಭಾಗಕ್ಕೂ ಗುರುತಿನ ಚೀಟಿ ವಿತರಣೆ ಮಾಡಲು ಮುಂದಿನ ದಿನಗಳಲ್ಲಿ ಉಪಸಮಿತಿ ರಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮನ್ವಯ ಸಮಿತಿ ಅಧ್ಯಕ್ಷ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಗುರುತಿನ ಚೀಟಿ ಸಿದ್ಧವಾದ ನಂತರ ಯಾವುದೇ ಲೋಪವಾಗದಂತೆ ಪ್ರತಿಯೊಬ್ಬರಿಗೂ ತಲುಪಬೇಕು. ಕಾರ್ಯಕ್ರಮದ ದಿನ ವೇದಿಕೆ ಮೇಲೆ ಇರುವ ಗಣ್ಯರು ಹಾಗೂ ವೇದಿಕೆ ಮೇಲೆ ಕಾರ್ಯನಿರ್ವಹಿಸುವವರಿಗೆ ಪೊಲೀಸ್ ಇಲಾಖೆ ಅವರ ಗಮನಕ್ಕೆ ತಂದು ಪಾಸ್ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಲಿಂಗರಾಜು, ಶಿಕ್ಷಕರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರಸನ್ನ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಲಕ್ಷ್ಮೀ, ಮಹಿಳಾ ಶಿಕ್ಷಕಿಯರ ಸಂಘದ ಸಹ ಕಾರ್ಯದರ್ಶಿ ಸುಜಾತಾ, ಬಿಸಿಎಂ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ್, ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ವಿ.ಹರ್ಷ, ಬಿ.ಎಂ.ಅಪ್ಪಾಜಪ್ಪ ಇತರರು ಇದ್ದರು.